ಕೊಳ್ಳೇಗಾಲ: ಚಾಮರಾಜನಗರಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲಾವಾರು 11ನೇ ಸ್ಥಾನ ಹಾಗೂ ತಾಲೂಕು ಕೊಳ್ಳೇಗಾಲ 4ನೇ ಸ್ಥಾನ ಪಡೆದಿರುವುದು ಕ್ಷೇತ್ರಕ್ಕೆ ಹಿರಿಮೆ. ಶೇ.100ರಷ್ಟು ಫಲಿತಾಂಶವನ್ನು 17 ಶಾಲೆಗಳು ತೆಗೆದುಕೊಂಡಿವೆ. 22 ಶಾಲೆಯ 85 ಮಕ್ಕಳು ನಪಾಸ್ ಆಗಿದ್ದಾರೆ. ಮುಂದಿನ ದಿನಗಳ ಶೇ.100ರಷ್ಟು ಉತೀರ್ಣವಾದ ಫಲಿತಾಂಶ ಬರುವಂತೆ ಪ್ರಯತ್ನಿಸಬೇಕು ಎಂದು ಶಾಸಕ ಎನ್.ಮಹೇಶ್ ಮನವಿ ಮಾಡಿದರು.
ಪಟ್ಟಣದ ಸಾವಿತ್ರಿ ಬಾಯಿ ಫುಲೆ ವೇದಿಕೆಯಲ್ಲಿ ಶಿಕ್ಷಕರ ದಿನಾಚರಣೆ ಸಮಾರಂಭ ಉದ್ದೇಶಿಸಿದ ಮಾತನಾಡಿದ ಅವರು, ಪರೀಕ್ಷೆಯಲ್ಲಿ ಫೇಲಾಗಿರುವ ಎಲ್ಲಾ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಗಮನಹರಿಸಿ, ಪೂರಕ ಪರೀಕ್ಷೆಯಲ್ಲಿ ಉತೀರ್ಣರಾಗುವಂತೆ ಮಾಡಬೇಕು. ಆಗ ಮಾತ್ರ ಝಿರೋ ಫೇಲ್ಯೂರ್ ಯಶಸ್ವಿಯಾಗುತ್ತದೆ ಎಂದರು.
ಹಂತ ಹಂತವಾಗಿ ಸಾಕ್ಷರತೆ ಪ್ರಮಾಣ ಬೆಳೆದು ಬಂದಿದೆ. ಇದು ಶೈಕ್ಷಣಿಕ ವಲಯದ ಅಭಿವೃದ್ಧಿ. ಸ್ವಾತಂತ್ರ ಪೂರ್ವ ಹಾಗೂ ನಂತರದ ಈ 120 ವರ್ಷಗಳಲ್ಲಿ ದೇಶದ ಶಿಕ್ಷಣ ವ್ಯವಸ್ಥೆ ಅಭಿವೃದ್ದಿಯಾಗುತ್ತಿದೆ. ಈ ಸುಧಾರಣೆಗೆ ಸಂವಿಧಾನ ಕಾರಣ. ಸಾವಿತ್ರಿ ಬಾಯಿಫುಲೆ, ಜ್ಯೋತಿಬಾಯಿ ಫುಲೆ ಕೊಡುಗೆ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಎಂದು ಎನ್ ಮಹೇಶ್ ಹೇಳಿದರು.
ಶಾಸಕ ನರೇಂದ್ರ ಮಾತನಾಡಿ, ಕೋವಿಡ್ನಿಂದಾಗಿ ಮಾನವ ಸಂಕುಲ ನಲುಗಿದೆ. ಈ ಸಂದಿಗ್ಧತೆಯಲ್ಲಿ ವಿದ್ಯಾಗಮ ಕಾರ್ಯಕ್ರಮ ಯಶಸ್ವಿಯಾಗಿದೆ. ಸರ್ಕಾರಿ ಶಾಲೆಯ ಶಿಕ್ಷಕರು ಸ್ವತಃ ಊರಿಗೆ ತೆರಳಿ ಮಕ್ಕಳಿಗೆ ಬೋಧನೆ ಮಾಡುತ್ತಿರುವುದು ಉತ್ತಮ ಕೆಲಸ. ಶೇ.70ರಷ್ಟು ಕಾರ್ಯಕ್ರಮ ಯಶಸ್ವಿಕಂಡಿದೆ ಎಂದರು.
ಇದೇ ಸಂದರ್ಭದಲ್ಲಿ ಶೇ.100ರಷ್ಟು ಫಲಿತಾಂಶ ನೀಡಿದ 17ಶಾಲೆಯ ಮುಖ್ಯೋಪಾಧ್ಯಾಯರು, 35 ನಿವೃತ್ತ ಶಿಕ್ಷಕರು, ಡಿದರ್ಜೆಯ ಸಿಬ್ವಂದಿಗೆ ಸನ್ಮಾನ ಮಾಡಲಾಯಿತು.