ಚಾಮರಾಜನಗರ: ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಜವಾಬ್ದಾರಿ ಮೆರೆಯಬೇಕಿದ್ದ ಗುಂಡ್ಲುಪೇಟೆ ಶಾಸಕ ನಿರಂಜನ್, ಎಲ್ಲವನ್ನೂ ಮರೆತು ಅದ್ಧೂರಿ ಅಭಿನಂದನೆ ಸ್ವೀಕರಿಸಿದ್ದಾರೆ. ಜೊತೆಗೆ ಸಾಮಾಜಿಕ ಅಂತರವನ್ನೂ ಮರೆತಿದ್ದಾರೆ.
ಅರಣ್ಯ ಕೈಗಾರಿಕಾ ನಿಗಮ ಮಂಡಳಿಯಲ್ಲಿ ಸ್ಥಾನ ದೊರೆತಿರುವುದಕ್ಕೆ ಅಭಿಮಾನಿಗಳು ಇಂದು ಶಾಸಕರಿಗೆ ಅದ್ಧೂರಿ ಸನ್ಮಾನ ಮಾಡಿದ್ದು, ಮಡಹಳ್ಳಿ ವೃತ್ತದಿಂದ ಖಾಸಗಿ ಕಲ್ಯಾಣ ಮಂಟಪದವರೆಗೆ ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆ ನಡೆಸಿದರು.
ಸಾಮಾಜಿಕ ಅಂತರ ಮರೆತ ಶಾಸಕ ನಿರಂಜನ್ ಕ್ರೇನ್ ಸಹಾಯದಿಂದ ಭಾರೀ ಗಾತ್ರದ ಹೂವಿನ ಹಾರ ಹಾಕುವ ಜೊತೆಗೆ ಪುಷ್ಪವೃಷ್ಟಿಯನ್ನು ಸುರಿಸಿ ಪಟಾಕಿ ಸಿಡಿಸಿದರು. ಈ ವೇಳೆ ಶಾಸಕ ನಿರಂಜನ್ ಕುಮಾರ್ ಸೇರಿದಂತೆ ನೂರಾರು ಜನರ ಮುಖಗವಸುಗಳು ಗದ್ದದಲ್ಲಿದ್ದವು. ಶಾರೀರಿಕ ಅಂತರವಂತೂ ಮರೆಯಾಗಿತ್ತು. ಗುಂಡ್ಲುಪೇಟೆಯಲ್ಲಿ 250ರ ಸಮೀಪ ಕೊರೊನಾ ಸೋಂಕಿತರಿದ್ದರೂ, ಈ ಆಡಂಬರ ಬೇಕಿತ್ತೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಕ್ರೇನ್ ಸಹಾಯದಿಂದ ಭಾರೀ ಗಾತ್ರದ ಹೂವಿನ ಹಾರ ಹಾಕಿದ ಅಭಿಮಾನಿಗಳು ಇಷ್ಟೇ ಅಲ್ಲದೆ, ಕಳೆದ ಜು. 26 ರಂದು ಸಿಎಂ ಯಡಿಯೂರಪ್ಪರನ್ನು ನಿರಂಜನ್ ಭೇಟಿ ಮಾಡಿದ್ದಾರೆ ಎನ್ನಲಾಗ್ತಿದ್ದು, ಇವರ ಕ್ವಾರಂಟೈನ್ ಬಗ್ಗೆ ಸ್ಪಷ್ಟವಾಗಿಲ್ಲ. ಯಡಿಯೂರಪ್ಪ ಸೋಂಕಿತರಾಗಿದ್ದಾರೆ. ಆದರೆ ಅವರ ಆಪ್ತ ಮಾತ್ರ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂದೂ ಕೆಲವರು ಕಿಡಿಕಾರಿದ್ದಾರೆ.