ಚಾಮರಾಜನಗರ: ಇಂದು ನಡೆದ ಬಜೆಟ್ ಮಂಡನೆಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ಲಭ್ಯವಾಗಿದ್ದು, ವಿವಿಧ ರಂಗಕ್ಕೆ ಸೇರಿದವರು ತಮ್ಮ ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ.
ನಿರೀಕ್ಷೆಯ ಮಟ್ಟದಲ್ಲಿ ಬಜೆಟ್ ಮೂಡಿಬಂದಿಲ್ಲ. ಚಿನ್ನದ ಮೇಲೆ ಮತ್ತು ಪೆಟ್ರೋಲ್, ಡಿಸೇಲ್ ಮೇಲೆ ತೆರಿಗೆ ಏರಿಸಿರುವುದು ಸರಿಯಲ್ಲ ಎಂದು ಕರ್ನಾಟಕ ಸೇನಾ ಪಡೆ ಅಧ್ಯಕ್ಷ ಚಾ.ರಂ. ಶ್ರೀನಿವಾಸಗೌಡ ಹೇಳಿದರು.
ವಿಶ್ವವೇ ಕಾತರದಿಂದ ಕಾಣುತ್ತಿದ್ದ ಭಾರತದ ಬಜೆಟ್ ಉತ್ತಮವಾಗಿದೆ. ಬ್ರೀಫ್ ಕೇಸ್ ಬಿಟ್ಟು ದೇಸಿ ಸಂಪ್ರದಾಯ ಪಾಲನೆ ಮಾಡಿರುವುದು ಖುಷಿ ತಂದಿದೆ. ರೈತರ, ಯುವಕರ, ಮಹಿಳೆಯರ ಮತ್ತು ಕೈಗಾರಿಕೋದ್ಯಮಿಗಳ ಪ್ರಗತಿಗೆ ಪೂರಕವಾದ ಬಜೆಟ್ ಇದಾಗಿದೆ ಎಂದು ಚಿಂತಕ ಸುರೇಶ್ ಋಗ್ವೇದಿ ಹೇಳಿದರು.
ಭಾರತದ ಉನ್ನತಿಗೆ ಪೂರಕವಾದ ಬಜೆಟ್ ಇದಾಗಿದ್ದು ಸಮಾಜದ ಪ್ರತಿಯೊಬ್ಬರ ಮೇಲೆ ನಿಗಾವಹಿಸಿ ಮಾಡಿದ ಆಯವ್ಯಯವಾಗಿದೆ. ಈ ಬಜೆಟ್ ಅಭಿವೃದ್ಧಿಗೆ ಪೂರಕವಾಗಿದೆ. ಸಣ್ಣ ಉದ್ಯಮಿದಾರರಿಗೆ ಸಾಲ, ಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ ಹೆಚ್ಚು ಒತ್ತು ನೀಡಿರುವುದು ಆಶಾದಾಯಕ ಬೆಳವಣಿಗೆ ಎಂದು ಯೋಗ ಶಿಕ್ಷಕ ಅಜಿತ್ ತಿಳಿಸಿದರು.
ಈ ಬಜೆಟ್ ಎಲ್ಲಾ ನಿರೀಕ್ಷೆಗಳನ್ನು ಹುಸಿ ಮಾಡಿದೆ. ರೈತರ ಕುರಿತು ಯಾವ ಯೋಜನೆ ನೀಡದೇ ಉಳ್ಳವರ ಪರ ಸರ್ಕಾರ ನಿಂತಿದೆ. ಇಂಧನದ ಮೇಲಿನ ತೆರಿಗೆ ಜನಸಾಮಾನ್ಯನಿಗೆ ಹೊರೆ ಬೀಳಲಿದ್ದು, ರಕ್ಷಣಾ ಸಚಿವೆಯಾಗಿ ಕ್ಲಿಕ್ ಆಗಿದ್ದ ನಿರ್ಮಲಾ ಸೀತಾರಾಮನ್ ವಿತ್ತ ಸಚಿವೆಯಾಗಿ ಸೋತಿದ್ದಾರೆ. ಬ್ರಿಟಿಷ್ ಸಂಪ್ರದಾಯ ಬಿಟ್ಟು ದೇಶದ ಸಂಸ್ಕೃತಿಯನ್ನು ಈ ಬಾರಿ ಆರಂಭಿಸಿರುವುದು ಅಭಿನಂದನೀಯ ಎಂದು ಸಾಹಿತಿ ಲಕ್ಷ್ಮೀನರಸಿಂಹ ಅಭಿಪ್ರಾಯಪಟ್ಟರು.
ಈ ಬಾರಿಯ ಬಜೆಟ್ ಎಲ್ಲಾ ವರ್ಗಗಳನ್ನು ಒಳಗೊಂಡಿದ್ದು ಎಲ್ಲರ ಅಭಿವೃದ್ಧಿಗೆ ಪೂರಕವಾಗಿದೆ. ಬ್ರೀಫ್ ಕೇಸ್ಗೆ ತಿಲಾಂಜಲಿ ಇಟ್ಟು ಹಿಂದೂ ಸಂಪ್ರದಾಯದ ಪ್ರಕಾರ ಬಜೆಟ್ ಪ್ರತಿ ಕೊಂಡೊಯ್ದದ್ದು ಬಹಳ ಸಂತಸದ ವಿಚಾರ ಎಂದು ಹೋಟೆಲ್ ಉದ್ಯಮಿ ಕಿಶೋರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಮೋದಿ ಲೆಕ್ಕಾಚಾರಕ್ಕೆ ಗಡಿಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬ್ರೀಫ್ ಕೇಸ್ ಬಿಟ್ಟು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಕ್ಕೆ ಹರ್ಷಗೊಂಡಿದ್ದಾರೆ.