ಚಾಮರಾಜನಗರ :ನೂತನ ಭೂ ಮಸೂದೆ ವಾಪಸ್ಗೆ ಆಗ್ರಹಿಸಿ ಕರೆ ನೀಡಿದ್ದ ಭಾರತ್ ಬಂದ್ಗೆ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾದ್ರೆ, ತಾಲೂಕು ಕೇಂದ್ರಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಬಂದ್ಗೆ ಜಿಲ್ಲಾ ಕೇಂದ್ರದಲ್ಲಿ ಉತ್ತಮ ಸ್ಪಂದನೆ ಬೆಳಗ್ಗೆ 7.40 ರಿಂದಲೇ ಆರಂಭವಾದ ವಿವಿಧ ಸಂಘಟನೆಗಳ ಪ್ರತಿಭಟನೆ ಬಿಸಿಲೇರುತ್ತಿದ್ದಂತೆ ತೀವ್ರತೆ ಹೆಚ್ಚಾಯಿತು. ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗವಷ್ಟೇ ಹೋರಾಟಗಾರರು ಮೊಕ್ಕಾಂ ಹೂಡಿದ್ದರಿಂದ ನಗರದ ಇತರೆಡೆ ವಾಹನ ಸಂಚಾರ ಸಾಮಾನ್ಯವಾಗಿತ್ತು. ಆದರೆ, ಬಹುತೇಕ ಎಲ್ಲಾ ಅಂಗಡಿ-ಮುಂಗಟ್ಟುಗಳು, ಹೋಟೆಲ್ಗಳು ಸಂಜೆವರೆಗೆ ಮುಚ್ಚಲಾಗಿತ್ತು.
ಇದನ್ನೂ ಓದಿ:ಬಂದ್ ಎಫೆಕ್ಟ್: ಚಾಮರಾಜನಗರ ಕೆಎಸ್ಆರ್ಟಿಸಿಗೆ 20 ಲಕ್ಷ ರೂ. ನಷ್ಟ
ಟೈರ್‌ಗಳಿಗೆ ಬೆಂಕಿ ಹಚ್ಚಿ ಹೆದ್ದಾರಿ ತಡೆ, ಕೆಎಸ್ಆರ್ಟಿಸಿ ನಿಲ್ದಾಣದಲ್ಲೇ ಅಡುಗೆ, ಪಾದಯಾತ್ರೆ ಮೂಲಕ ಹೋರಾಟಗಾರರು ಗಮನ ಸೆಳೆದರು. ಉಳಿದಂತೆ, ಇಂದಿನ ಪ್ರತಿಭಟನೆಗೆ ಕಾಂಗ್ರೆಸ್, ಬಿಎಸ್ಪಿ, ಕನ್ನಡಪರ ಸಂಘಟನೆಗಳು, ಎಸ್ಡಿಪಿಐ, ಪಿಎಫ್ಐ ಬೆಂಬಲಿಸಿದ್ದವು.
ರೈತನಾಯಕಿ ಚುಕ್ಕಿ ನಂಜುಂಡಸ್ವಾಮಿ, ಮಾಜಿ ಸಂಸದ ಆರ್.ಧ್ರುವನಾರಾಯಣ, ರೈತ ಮುಖಂಡ ಹೊನ್ನೂರು ಪ್ರಕಾಶ್, ಪ್ರಗತಿಪರರಾದ ವೆಂಕಟರಾಜು, ಸಿ ಎಂ ಕೃಷ್ಣಮೂರ್ತಿ ಇನ್ನಿತರರು ಭಾಗವಹಿಸಿದ್ದರು.
ತಾಲೂಕು ಕೇಂದ್ರಗಳಲ್ಲಿ ನೀರಸ :ರೈತ ಹೋರಾಟಗಾರರು ಜಿಲ್ಲಾ ಕೇಂದ್ರಕ್ಕೆ ಹೆಚ್ಚು ಒತ್ತು ನೀಡಿದ್ದರಿಂದ ತಾಲೂಕು ಕೇಂದ್ರಗಳಾದ ಹನೂರು, ಗುಂಡ್ಲುಪೇಟೆ, ಯಳಂದೂರು ಹಾಗೂ ಕೊಳ್ಳೇಗಾಲದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.