ಕರ್ನಾಟಕ

karnataka

ETV Bharat / state

ಚಾಮರಾಜನಗರ... ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡ ಸಚಿವ ವೆಂಕಟೇಶ್.. ಕಾರಣ?

ಚಾಮರಾಜನಗರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಸ್ಪಷ್ಟ ಹಾಗೂ ಅಪೂರ್ಣ ಮಾಹಿತಿ ನೀಡಿದ ಅಧಿಕಾರಿಯನ್ನು ಸಚಿವ ವೆಂಕಟೇಶ್​ ತರಾಟೆಗೆ ತೆಗೆದುಕೊಂಡರು.

By

Published : Jul 24, 2023, 7:20 PM IST

Updated : Jul 25, 2023, 7:44 AM IST

ಚಾಮರಾಜನಗರದಲ್ಲಿ ನಡೆದ ಕೆಡಿಪಿ ಸಭೆ
ಚಾಮರಾಜನಗರದಲ್ಲಿ ನಡೆದ ಕೆಡಿಪಿ ಸಭೆ

ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡ ಸಚಿವ ವೆಂಕಟೇಶ್

ಚಾಮರಾಜನಗರ :ರೇಷ್ಮೆ ಹಾಗೂ ಪಶುಸಂಗೋಪನೆ, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಇಂದು ಬೆಳಗ್ಗೆಯಿಂದ ಸಂಜೆವರೆಗೆ ಜಿಲ್ಲಾಮಟ್ಟದ ಅಧಿಕಾರಿಗಳ ಜೊತೆ ಕೆಡಿಪಿ ಸಭೆ ನಡೆಸಿದರು. ಸಭೆ ಆರಂಭದಲ್ಲೇ ಪ್ರಶ್ನೆಗಳನ್ನು ಕೇಳಿದ ಸಚಿವ ಕೆ. ವೆಂಕಟೇಶ್, ಅಧಿಕಾರಿಗಳು ನೀಡುತ್ತಿದ್ದ ಅಸ್ಪಷ್ಟ, ಅಪೂರ್ಣ ಮಾಹಿತಿಗೆ ಕೆಂಡಾಮಂಡಲರಾಗಿ ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ರೇಷ್ಮೆ ಇಲಾಖೆಯಲ್ಲಿ ಜಿಲ್ಲೆಯಲ್ಲಿರುವ ಜಮೀನು, ನರ್ಸರಿ, ಆಸ್ತಿ ಬಗ್ಗೆ ಸಚಿವರು ಕೇಳಿದ ಪ್ರಶ್ನೆಗೆ ತಡಬಡಾಯಿಸಿದ ರೇಷ್ಮೆ ಇಲಾಖೆ ಡಿಡಿ ನಾಗೇಂದ್ರಪ್ಪ ವಿರುದ್ಧ ಹರಿಹಾಯ್ದ ಸಚಿವರು, ಆಫೀಸ್​ನಲ್ಲಿ ಕುಳಿತು ಸರ್ಕಾರದ ಹಣ ಜನರಿಗೆ ಕೊಡುವುದು ಸಾಧನೆಯಲ್ಲ. ರೇಷ್ಮೆಗೆ ಏನು ಉತ್ತೇಜನ ಕೈಗೊಂಡಿದ್ದೀರಿ?. ಸಾಮಾನ್ಯ ಅಂಕಿ-ಅಂಶದ ವಿವರವೂ ನಿನ್ನಲ್ಲಿ ಇಲ್ಲವಲ್ಲ? ಎಂದು ಕಿಡಿಕಾರಿದರು. ಅಷ್ಟೇ ಅಲ್ಲ ಸಿಇಒ ಪೂವಿತಾಗೆ ಅಧಿಕಾರಿ ವಿರುದ್ಧ ರಿಪೋರ್ಟ್ ಸಲ್ಲಿಸುವಂತೆ ಸೂಚಿಸಿದರು.

ನಗರಸಭೆ ಜೊತೆಗೂಡಿ ನೈರ್ಮಲ್ಯ ಕಾಪಾಡಿ: ಜಿಲ್ಲೆಯಲ್ಲಿ ಡೆಂಘೀ ಜ್ವರ ಉಲ್ಭಣಗೊಂಡ ಮಾಹಿತಿ ಪಡೆದ ಕೆ. ವೆಂಕಟೇಶ್, ಕಾಯಿಲೆ ತಡೆಗಟ್ಟಲು ಏನು ಕ್ರಮ ಕೈಗೊಂಡಿದ್ದೀರಿ ಎಂದು ಕೇಳಿದ್ದಕ್ಕೆ, ಮನೆ ಮನೆ ಸರ್ವೆ ಮಾಡುತ್ತಿದ್ದೇವೆ ಎಂದು ಉತ್ತರಿಸಿದ ಡಿಎಚ್ಒ ವಿಶ್ವೇಶ್ವರಯ್ಯಗೆ- ನಾನೇನು ಕೇಳುತ್ತಿದ್ದೀನಿ, ನೀನೇನೂ ಬಡಿದುಕೊಳ್ಳುತ್ತಿದ್ದೀಯಾ. ಸರ್ವೆ ಮಾಡೋದು ಜ್ವರ ಯಾರಿಗೆ ಬಂದಿದೆ ಅಂಥಾ ತಿಳಿಯಲು. ನಗರಸಭೆ ಜೊತೆಗೂಡಿ ನೈರ್ಮಲ್ಯ ಕಾಪಾಡಿ. ನೀರು ನಿಲ್ಲದಂತೆ ಎಚ್ಚರವಹಿಸಿ ಎಂದು ಸೂಚಿಸಿದರು.

ಬಾಡಿಗೆ ಅಂಗನವಾಡಿ, ನೀರಿಲ್ಲದ ಕಟ್ಟಡ ಎಂದ ಅಧಿಕಾರಿಗೆ ಛೀಮಾರಿ: ಚಾಮರಾಜನಗರ ಜಿಲ್ಲೆಯಲ್ಲಿ ಬಹುತೇಕ ಕಡೆ ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿವೆ. ಜೊತೆಗೆ ಹಲವು ಅಂಗನವಾಡಿ ಕಟ್ಟಡಗಳಿಗೆ ನೀರಿನ ಸಂಪರ್ಕ ಇಲ್ಲ. ಚಾಮರಾಜನಗರ ಜಿಲ್ಲಾಕೇಂದ್ರದ ಹಲವು ಅಂಗನವಾಡಿ ಕೇಂದ್ರಗಳಿಗೆ ನೀರಿನ ಸಂಪರ್ಕ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಗೀತಾಲಕ್ಷ್ಮೀ ತಿಳಿಸುತ್ತಿದ್ದಂತೆ ಕುಪಿತಗೊಂಡ ಸಚಿವರು ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ,‌ ನಗರ, ಪಟ್ಟಣ ಪ್ರದೇಶದಲ್ಲಿ ನಿವೇಶನ ಸಿಗುವುದು ಕಷ್ಟ. ಆದರೆ, ಹನೂರಲ್ಲಿ 72 ಕಟ್ಟಡ ಬಾಡಿಗೆ ನಡೆಸುತ್ತಿದ್ದೀರಲ್ಲಾ, ಹಳ್ಳಿಗಳಲ್ಲಿ ನಿವೇಶನ ಇಲ್ಲವೇ? ಎಂದು ಗರಂ ಆದರು. ನೀವು ಶಾಮೀಲಾಗಿರುವುದಕ್ಕೆ ಈ ರೀತಿ ಉತ್ತರ ಬರುತ್ತಿದೆ. ನಗರ ಪ್ರದೇಶಗಳಲ್ಲಿ ನೀರಿನ ಸಂಪರ್ಕ ಇಲ್ಲವೆಂದರೆ ಏನರ್ಥ? ನೀವೇನೂ ಕೆಲಸ ಮಾಡುತ್ತಿಲ್ಲ ಎಂದು ಕಿಡಿಕಾರಿದರು.

ಕೊಳ್ಳೇಗಾಲ ಶಾಸಕ ಎ ಆರ್‌ ಕೃಷ್ಣಮೂರ್ತಿ ಮಾತನಾಡಿ, ಅಂಗನವಾಡಿ ನೌಕರರೊಬ್ಬರು ಬದುಕಿ, ಕೆಲಸ ಮಾಡುವಾಗಲೇ ಅವರು ಸತ್ತರೆಂದು ದಾಖಲೆ ಸೃಷ್ಟಿಸಿ ಹಣ ಗುಳುಂ‌ ಮಾಡಿರುವ ಬಗ್ಗೆ ಉತ್ತರಿಸಿ ಎಂದು ಗೀತಾಲಕ್ಷ್ಮೀ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಗೀತಾಲಕ್ಷ್ಮೀ ಉತ್ತರಿಸಿ, ಕಳೆದ ನಾಲ್ಕು ವರ್ಷಗಳಿಂದ ಇಲಾಖೆಯ ಕಂಪ್ಯೂಟರ್ ಆಪರೇಟರ್ ಈ ರೀತಿ ಕೆಲಸ ಮಾಡಿದ್ದು, 150 ಮಂದಿಗೆ ಈ ರೀತಿ ಮೋಸ ಮಾಡಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದು, ನೌಕರ ಕಳೆದ ವರ್ಷ ನಿವೃತ್ತರಾಗಿದ್ದಾರೆಂದು ಹೇಳಿದರು. ಇದಕ್ಕೆ ಬೆಚ್ಚಿಬಿದ್ದ ಶಾಸಕರು, ನಾವು ಒಬ್ಬರಿಗೆ ಮೋಸ ಅಂದುಕೊಂಡಿದ್ದೆವು. ನೀವು 150 ಮಂದಿ ಎನ್ನುತ್ತಿದ್ದೀರಿ. ನೀವು ಹೇಗೆ ಆತ ಕೊಟ್ಟ ದಾಖಲೆಗೆ ಸಹಿ ಮಾಡಿದೀರಿ? ಕೂಡಲೇ ಇದರ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. ಇದರ ಸಂಬಂಧ ಪರಿಶೀಲನೆ ನಡೆಸುವಂತೆ ಡಿಸಿಗೆ ಸಚಿವರು, ಶಾಸಕ ಎ ಆರ್ ಕೃಷ್ಣಮೂರ್ತಿ ಸೂಚಿಸಿದರು.

ಗೃಹಜ್ಯೋತಿ - ಶಕ್ತಿ ಯೋಜನೆ ಸಕ್ಸಸ್: ಗ್ಯಾರಂಟಿ ಯೋಜನೆಗಳ‌ ಬಗ್ಗೆ ಸಭೆಯ ಆರಂಭದಲ್ಲೇ ಚರ್ಚೆ ಆಯಿತು.‌ ಗೃಹಜ್ಯೋತಿ ಯೋಜನೆಗೆ ಜಿಲ್ಲೆಯಲ್ಲಿ ಶೇ. 63 ರಷ್ಟು ಮಂದಿ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಶಕ್ತಿ ಯೋಜನೆಯಿಂದಾಗಿ ಜಿಲ್ಲೆಯಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ದ್ವಿಗುಣಗೊಂಡಿದ್ದು, ನಿತ್ಯ 1.60 ಲಕ್ಷ ಮಂದಿ ಪ್ರಯಾಣ ಮಾಡುತ್ತಿದ್ದಾರೆ. ಕಳೆದ ತಿಂಗಳು 8 ಕೋಟಿ ರೂ.‌ನಷ್ಟು ಬಿಲ್​ನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇನ್ನು ಅನ್ನಭಾಗ್ಯ ನಗದು ವರ್ಗಾವಣೆಯಡಿ ಶೇ. 100 ರಷ್ಟು ಹಣ ವರ್ಗಾವಣೆಗೊಂಡಿದೆ. ಗೃಹಜ್ಯೋತಿ ಯೋಜನೆಯಡಿ 28 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಸಭೆಗೆ ಅಧಿಕಾರಿಗಳು ಮಾಹಿತಿ ನೀಡಿದರು.

ಗ್ಯಾರಂಟಿ ಯೋಜನೆಯಿಂದ ಅರ್ಹ ಫಲಾನುಭವಿ ಯಾರೂ ತಪ್ಪಿಸಿಕೊಳ್ಳಬಾರದು. ಗೃಹಲಕ್ಷ್ಮಿ ಯೋಜನೆಗೆ ಮತ್ತಷ್ಟು ವೇಗ ಕೊಡಬೇಕು ಎಂದು ಸಚಿವರು ಸೂಚಿಸಿದರು. ಸಭೆಯಲ್ಲಿ ಶಾಸಕರುಗಳಾದ ಗಣೇಶ್ ಪ್ರಸಾದ್, ಎಂ. ಆರ್ ಮಂಜುನಾಥ್, ವಿಧಾನ ಪರಿಷತ್ ಸದಸ್ಯರುಗಳಾದ ಮರಿತಿಬ್ಬೇಗೌಡ, ತಿಮ್ಮಯ್ಯ, ಮಂಜೇಗೌಡ ಇದ್ದರು.

ಇದನ್ನೂ ಓದಿ:ಆರ್ ಆರ್ ನಗರಕ್ಕಾಗಿ ನನ್ನ ವಿರುದ್ಧ ಷಡ್ಯಂತ್ರ.. ಹನಿಟ್ರ್ಯಾಪ್ ದೂರಿಗೆ ಮುನಿರತ್ನ ಪ್ರತಿಕ್ರಿಯೆ

Last Updated : Jul 25, 2023, 7:44 AM IST

ABOUT THE AUTHOR

...view details