ಕರ್ನಾಟಕ

karnataka

ETV Bharat / state

ಖತರ್ನಾಕ್, ಏಜೆಂಟ್, ಚಾಂಡಾಳ.. ಅಧಿಕಾರಿಗಳಿಗೆ ಮಾತಿನ ಕಜ್ಜಾಯ ಕೊಟ್ಟ ಸಚಿವ ಸೋಮಣ್ಣ

ಅಕ್ರಮ ಗಣಿಗಾರಿಕೆ ವಿರುದ್ಧ ರೈತರ ಹೋರಾಟಕ್ಕೆ ನಾನು ಬೆಂಬಲವಾಗಿರುತ್ತೇನೆ. ಭೂಮಿಯನ್ನು ಬಗೆದು ಲೂಟಿ ಹೊಡೆಯುವವರು ಯಾರೂ ನಮ್ಮ ಜಿಲ್ಲೆಯವರಲ್ಲ. ಪರವಾನಗಿ ಪಡೆದು ಉಪಗುತ್ತಿಗೆ ನೀಡುವುದನ್ನು ಮಟ್ಟ ಹಾಕುತ್ತೇವೆ-ಸಚಿವ ವಿ ಸೋಮಣ್ಣ ಎಚ್ಚರಿಕೆ.

Minister V Somanna
ಸಚಿವ ಸೋಮಣ್ಣ

By

Published : Nov 19, 2022, 12:03 PM IST

ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವ ವಿ‌.ಸೋಮಣ್ಣ ಅಧ್ಯಕ್ಷತೆಯಲ್ಲಿ ಬರೋಬ್ಬರಿ ಮೂರುವರೆ ತಾಸು ನಗರದ ಜಿ.ಪಂ ಸಭಾಂಗಣದಲ್ಲಿ ರೈತರಿಗೆ ಸಂಬಂಧಿಸಿದ ವಿಷಯಗಳು ಹಾಗೂ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕುರಿತು ಸಭೆ ನಡೆಯಿತು. ಈ ವೇಳೆ ಸಚಿವ ಸೋಮಣ್ಣ ಅವರು ಅಧಿಕಾರಿಗಳಿಗೆ ಮಾತಿನಿಂದಲೇ ಚಾಟಿ ಬೀಸಿದರು.

ಜಿಲ್ಲೆಯಲ್ಲಿ ಎಗ್ಗಿಲ್ಲದೇ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ರೈತರ ಭೂಮಿ, ರಸ್ತೆಗಳು ಹಾಳಾಗುತ್ತಿದ್ದು ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸ್ಥಗಿತಗೊಂಡ ಗಣಿಗಳಲ್ಲೂ ಲೂಟಿ ನಡೆಯುತ್ತಿದೆ ಎಂದು ರೈತರು ಒಂದೇ ಸಮನೆ ದೂರಿನ ಮಳೆಗೈದರು. ಇದರಿಂದ ಗರಂ ಆದ ಸಚಿವ ಸೋಮಣ್ಣ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಡಿ.ಡಿ ನಂಜುಂಡಸ್ವಾಮಿ ಅವರಿಗೆ ಹಿಗ್ಗಾಮುಗ್ಗಾ ಜಾಡಿಸಿದರು.

ಈತ ಬಹಳ ಖತರ್ನಾಕ್ ಅಂತಾ ಗೊತ್ತಿದೆ. ನನ್ನ ಬಳಿ ಮಾಹಿತಿ ಇದೆ. ಕೋರ್ಟ್​ಲ್ಲಿ ಸ್ಟೇ ತಂದು ನೀವೆ ಗಣಿ ಆರಂಭಿಸುತ್ತೀರಾ? ಅಥವಾ ಏಜೆಂಟ್ ರೀತಿ ಕೆಲಸ ‌ಮಾಡುತ್ತೀರಾ ಎಂದು ಕಿಡಿಕಾರಿ ಇಂದೇ ಕರ್ತವ್ಯದಿಂದ ಬಿಡುಗಡೆಗೊಳಿಸಿ ಎಂದು ಡಿಸಿಗೆ ನಿರ್ದೇಶನ ನೀಡಿದರು.

ಅಧಿಕಾರಿಗಳಿಗೆ ಮಾತಿನಿಂದಲೇ ಚಾಟಿ ಬೀಸಿದ ಸಚಿವ ಸೋಮಣ್ಣ

ಫೈನಾನ್ಸ್ ಅವರ ಕಿರುಕುಳ ವಿಪರೀವಾಗುತ್ತಿದೆ. ರೈತರಿಗೆ ಹಿಂಸೆ ನೀಡುತ್ತಿದ್ದಾರೆ ಎಂದು ರೈತ ಮುಖಂಡರು ಅಳಲು ತೋಡಿಕೊಂಡಿದ್ದಕ್ಕೆ ಸಚಿವರು ಪ್ರತಿಕ್ರಿಯಿಸಿ ಅವರು ಬಹಳ ಚಾಂಡಾಲರು, ಎಷ್ಟು ಸಾರಿ ಬೈದರು ಏನು ಬೈಸಿಕೊಂಡು ಎದ್ದು ಹೋಗುತ್ತಾರೆ. ಇವರಿಗೆ ಬಿಸಿ ಮುಟ್ಟಿಸುತ್ತೇನೆ, ಫೈನಾನ್ಸ್ ನವರ ಕಿರುಕುಳ ಈಗಿನಂದಲ್ಲ. ಹತ್ತಾರು ವರ್ಷಗಳಿಂದಲೂ ಇದೆ ಎಂದು‌‌ ಅಸಮಾಧಾನ ವ್ಯಕ್ತಪಡಿಸಿದರು. ಅಕ್ರಮ ಗಣಿಗಾರಿಕೆಗೆ ವಿರುದ್ಧ ರೈತರ ಹೋರಾಟಕ್ಕೆ ನಾನು ಬೆಂಬಲವಾಗಿರುತ್ತೇನೆ. ಭೂಮಿಯನ್ನು ಬಗೆದು ಲೂಟಿ ಹೊಡೆಯುವವರು ಯಾರೂ ನಮ್ಮ ಜಿಲ್ಲೆಯವರಲ್ಲ. ಪರವಾನಗಿ ಪಡೆದು ಉಪಗುತ್ತಿಗೆ ನೀಡುವುದನ್ನು ಮಟ್ಟ ಹಾಕುತ್ತೇವೆ ಎಂದು ಗುಡುಗಿದರು.

ಹುಲಿ ರಕ್ಷಿತಾರಣ್ಯ ಮಾಡಲ್ಲ- ಮರ ಕಟಾವು ಅನುಮತಿ ವಿಳಂಬ ಸಲ್ಲ:ಸಂಪುಟ ಸಭೆಯಲ್ಲಿ ಮಲೆಮಹದೇಶ್ವರ ವನ್ಯಜೀವಿ ಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಮಾಡಬೇಕೆಂಬ ವಿಚಾರಕ್ಕೆ ರಕ್ಷಿತಾರಣ್ಯ ಮಾಡಬಾರದು ಎಂದು ನೇರವಾಗಿ ಹೇಳಿದ್ದೇನೆ. ಮಲೆಮಹದೇಶ್ವರ ವನ್ಯಜೀವಿ ಧಾಮ ಹುಲಿ ಸಂರಕ್ಷಿತ ಪ್ರದೇಶ ಆಗಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಇನ್ನು, ಇದೇ ವೇಳೆ ರೈತರು ಅರಣ್ಯ ಕೃಷಿ ಕೈಗೊಂಡು ಮರ ಕಟಾವಿಗೆ ಅಧಿಕಾರಿಗಳು ಸತಾಯಿಸುವುದು ಸರ್ಕಾರದ ಗಮನಕ್ಕೆ ಬಂದಿದ್ದು ನೂತನ ಮಾರ್ಗಸೂಚಿ ಶೀಘ್ರವೇ ಬಿಡುಗಡೆಯಾಗಲಿದೆ. ರೈತ ತಂದುಕೊಟ್ಟ ಅರ್ಜಿ ಹಾಗೂ ಆತ‌‌ ನೀಡಿದ‌ ಮಾಹಿತಿಯನ್ನು ಅರಣ್ಯ ಇಲಾಖೆ ಪಡೆದು ಕೂಡಲೇ ಕಟಾವಿಗೆ ಅನುಮತಿ ಕೊಡಬೇಕೆಂದು ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.

ಎಪಿಎಂಸಿಯಲ್ಲಿ ಡೀಲರ್​​ಗಳು ಶೇ.10 ರಷ್ಟು ಕಮಿಷನ್ ಪಡೆಯುತ್ತಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಎಪಿಎಂಸಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.‌ ಆ ರೀತಿ ಕಮಿಷನ್ ಪಡೆಯುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ಕೊಡುತ್ತಿದ್ದಂತೆ ರೈತರು ಅಧಿಕಾರಿ ವಿರುದ್ದ ಕೆಂಡಾಮಂಡಲರಾಗಿ ಸಭೆಯಲ್ಲೇ ತರಾಟೆಗೆ ತೆಗೆದುಕೊಂಡರು. ಜಿಲ್ಲಾಧಿಕಾರಿ ವಾರಕ್ಕೆ ಒಂದು ದಿನ 3 ತಾಸು ರೈತರ ಸಭೆ ಕರೆಯಬೇಕೆಂದು ಸೋಮಣ್ಣ ಸೂಚನೆ ಕೊಟ್ಟರು.

ಶಾಸಕರಾದ ಪುಟ್ಟರಂಗಶೆಟ್ಟಿ, ಮಹೇಶ್, ಕಾಡಾ ಅಧ್ಯಕ್ಷ ನಿಜಗುಣರಾಜು ಹಾಗೂ ಉನ್ನತ ಅಧಿಕಾರಿಗಳು, ರೈತ ಸಂಘ, ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ:ಈ ಕೆಲಸ ಮಾಡಿದ್ದು ಮೈತ್ರಿ ಸರ್ಕಾರ: ಆದರೆ ಆರೋಪ ನಮ್ಮ ಮೇಲೆ... ಸಚಿವ ಸೋಮಣ್ಣ

ABOUT THE AUTHOR

...view details