ಕೊಳ್ಳೇಗಾಲ: ರೇಷ್ಮೆ ರೈತರಿಗೆ ಹಾಗೂ ರೀಲರ್ಸ್ಗಳಿಗೆ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಚಿವ ಸುರೇಶ್ ಕುಮಾರ್ ಪದೇ ಪದೇ ಮನವಿ ಮಾಡಿದರು.
ರೇಷ್ಮೆ ಮಾರುಕಟ್ಟೆಗೆ ಭೇಟಿ ನೀಡಿದ ಸಚಿವ ಸುರೇಶ್ ಕುಮಾರ್ ಕೊಳ್ಳೇಗಾಲ ಪಟ್ಟಣದ ಅತಿಥಿ ಗೃಹದಲ್ಲಿ ಶಾಸಕ ಎನ್.ಮಹೇಶ್, ನಿರಂಜನ್, ನರೇಂದ್ರ ಜೊತೆಯಲ್ಲಿ ಸಚಿವ ಸುರೇಶ್ ಕುಮಾರ್ ಕೊಳ್ಳೇಗಾಲ, ಹನೂರು ಹಾಗೂ ಯಳಂದೂರು ತಾಲೂಕುಗಳಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಮಾಡುವ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ರೇಷ್ಮೆಗೂಡಿನ ಮಾರುಕಟ್ಟೆಗೆ ಭೇಟಿ ನೀಡಿದರು.
ಮಾರುಕಟ್ಟೆಯಲ್ಲಿ ರೈತರು ಅಲ್ಲಲ್ಲಿ ಗುಂಪಾಗಿ ನಿಂತಿರುವುದನ್ನು ಕಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಆರೋಗ್ಯದ ದೃಷ್ಟಿಯಿಂದ ಗುಂಪು ಸೇರಬಾರದು. ನಿಯಮ ಉಲ್ಲಂಘಿಸಿದವರನ್ನು ಹೊರಗೆ ಕಳುಹಿಸಿ ಎಂದು ಸಚಿವರು ಗರಂ ಆದರು.
ರೀಲರ್ಸ್ಗಳ ಒತ್ತಾಯ:
ರೈತರ ಸಮಸ್ಯೆ ಬಗೆಹರಿಸುವ ಸಲುವಾಗಿ ರೇಷ್ಮೆಗೂಡು ಮಾರುಕಟ್ಟೆಯನ್ನು ಆರಂಭಿಸಲಾಗುತ್ತಿದೆ. ಆದರೆ, ಮಾರುಕಟ್ಟೆಯಲ್ಲಿ ರೇಷ್ಮೆ ಗೂಡನ್ನು ಖರೀದಿ ಮಾಡಿ, ರೇಷ್ಮೆ ತಯಾರಿಸಿದ ಬಳಿಕ ರೀಲರ್ಸ್ ರೇಷ್ಮೆ ಮಾರಾಟ ಮಾಡದೇ ಪರದಾಡುತ್ತಿದ್ದಾರೆ. ಆದ್ದರಿಂದ ರೇಷ್ಮೆ ರೀಲರ್ಸ್ಗಳ ಬಳಿ ಇರುವ ರೇಷ್ಮೆ ಖರೀದಿ ಮಾಡಲು ಅವಕಾಶ ಕಲ್ಪಿಸಿ ಅಥವಾ ಲಾಕ್‌ಡೌನ್ ಮುಕ್ತಾಯದವರೆಗೂ ರೇಷ್ಮೆಗೂಡು ಮಾರುಕಟ್ಟೆಯನ್ನು ಮುಚ್ಚಿ ಎಂದು ರೀಲರ್ಸ್ ಒತ್ತಾಯಿಸಿದರು.
ರೀಲರ್ಸ್ ಸಮಸ್ಯೆ ಆಲಿಸಿ ಬಳಿಕ ಯಾವುದೇ ಪ್ರತಿಕ್ರಿಯೆ ನೀಡದೇ ಹೋಗುತ್ತಿದ್ದ ಸಚಿವರ ಹಿಂದೆಬಿದ್ದ ರೀಲರ್ಸ್ಗಳನ್ನು ಪೊಲೀಸರು ತಡೆದರು. ನಂತರ ಮಾರುಕಟ್ಟೆಯ ಒಳಗೆ ಕಾರನ್ನು ತರಿಸಿ ಸಚಿವರು ತೆರಳಿದ್ದಾರೆ.