ಕರ್ನಾಟಕ

karnataka

ETV Bharat / state

ಭಯ ಬಿಡಿ, ನಾನೂ‌ ಕೋವಿಡ್ ಗೆದ್ದು ಬಂದಿದ್ದೇನೆ: ಸೋಂಕಿತರಿಗೆ ಧೈರ್ಯ ತುಂಬಿದ ಸಚಿವ ಸುರೇಶ್ ಕುಮಾರ್ - ಕೋವಿಡ್ ಸುದ್ದಿ

ಕೋವಿಡ್ ಪೀಡಿತ ಮಹಿಳೆಗೆ ಇಂದು ಬೆಳಗ್ಗೆಯಷ್ಟೇ ಹೆರಿಗೆಯಾಗಿದ್ದು, ತಾಯಿ ಮಗುವನ್ನು ಸಚಿವರು ಭೇಟಿ ಮಾಡಿದರು. "ಕೋವಿಡ್ ಸಂದರ್ಭದಲ್ಲಿ ಮಗು ಜನಿಸಿದೆ. ಒಳ್ಳೆ ಹೆಸರಿಡಿ" ಎಂದು‌ ಹೇಳಿ ತಾಯಿಯ ಮುಖದ ಮೇಲೆ ವಿಶ್ವಾಸದ ನಗೆಯನ್ನು ತುಂಬಿದರು.

minister suresh kumar visit chamaraj nagar district hospital
ಭಯ ಬಿಡಿ, ನಾನೂ‌ ಕೋವಿಡ್ ಗೆದ್ದು ಬಂದಿದ್ದೇನೆ: ಸೋಂಕಿತರಿಗೆ ಧೈರ್ಯ ತುಂಬಿದ ಸಚಿವ ಸುರೇಶ್ ಕುಮಾರ್

By

Published : May 5, 2021, 7:38 PM IST

Updated : May 5, 2021, 9:11 PM IST

ಚಾಮರಾಜನಗರ: ಇಂದು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಸಚಿವ ಸುರೇಶ್‌ಕುಮಾರ್, ಪಿಪಿಇ ಕಿಟ್ ಧರಿಸಿ ಕೋವಿಡ್ ವಾರ್ಡಿಗೆ ಭೇಟಿಯಿತ್ತು ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು.


ವಾರ್ಡಿನಲ್ಲಿ ಸೋಂಕಿತರ ಜೊತೆ ಮಾತನಾಡಿ, ಆಸ್ಪತ್ರೆಗೆ ಬಂದು ಎಷ್ಟು ದಿನ ಆಯ್ತು, ಅವತ್ತಿಗೂ ಇವತ್ತಿಗೂ ಹೇಗಿದ್ದೀರಿ, ಊಟ ಮಾಡಿದಿರಾ, ವೈದ್ಯರು‌ ನಿಮ್ಮನ್ನು ಚೆನ್ನಾಗಿ‌ ನೋಡ್ಕೊಳ್ತಿದಾರಾ, ಸಕಾಲಕ್ಕೆ ಆರೈಕೆ ದೊರೆಯುತ್ತಿದೆಯಾ, ಸಮಸ್ಯೆ ಆದ ತಕ್ಷಣ‌ ಪರಿಹಾರಕ್ಕೆ ಪ್ರಯತ್ನ ನಡೀತಿದೆಯಾ ಎಂದು‌ ಪ್ರಶ್ನಿಸಿ ಎಲ್ಲರೂ ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.

ಕೆಲವು ಸೋಂಕಿತರ ಆಮ್ಲಜನಕ ಸಂಪೂರ್ಣತೆಯನ್ನು (Oxygen saturation) ವೈದ್ಯಾಧಿಕಾರಿಗಳ ಸಹಾಯದೊಂದಿಗೆ ತಾವೇ‌ ಖುದ್ದಾಗಿ ಪರೀಕ್ಷಿಸಿದ ಅವರು ಕೆಲ ತಿಂಗಳ ಹಿಂದೆ‌ ನಿಮ್ಮ ಥರ ನಾನೂ ಕೋವಿಡ್ ಸೋಂಕಿತನಾಗಿದ್ದೆ. ನನ್ನ ಶ್ವಾಸಕೋಶವೂ ತೀವ್ರವಾದ ಸೋಂಕಿಗೊಳಗಾಗಿತ್ತು. ನಾವೆಲ್ಲ ಕೊರೋನಾ ವಾರಿಯರ್​ಗಳೇ. ದಿಟ್ಟವಾಗಿ ಇದನ್ನು ಎದುರಿಸೋಣ. ಧೃತಿಗೆಡದಿದ್ದರೆ‌ ಅದು ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ ಎಂದು ಹುರಿದುಂಬಿಸಿದರು.

ಕೋವಿಡ್ ಪೀಡಿತ ಮಹಿಳೆಗೆ ಇಂದು ಬೆಳಗ್ಗೆಯಷ್ಟೇ ಹೆರಿಗೆಯಾಗಿದ್ದು, ತಾಯಿ ಮಗುವನ್ನು ಸಚಿವರು ಭೇಟಿ ಮಾಡಿದರು. "ಕೋವಿಡ್ ಸಂದರ್ಭದಲ್ಲಿ ಮಗು ಜನಿಸಿದೆ. ಒಳ್ಳೆ ಹೆಸರಿಡಿ" ಎಂದು‌ ಹೇಳಿ ತಾಯಿಯ ಮುಖದ ಮೇಲೆ ವಿಶ್ವಾಸದ ನಗೆಯನ್ನು ತುಂಬಿದರು.

ಭಯ ಬಿಡಿ, ನಾನೂ‌ ಕೋವಿಡ್ ಗೆದ್ದು ಬಂದಿದ್ದೇನೆ: ಸೋಂಕಿತರಿಗೆ ಧೈರ್ಯ ತುಂಬಿದ ಸಚಿವ ಸುರೇಶ್ ಕುಮಾರ್

ಯಾವುದೇ ಸೋಂಕಿತರು ಅಧೈರ್ಯಕ್ಕೊಳಗಾಗದಿರಿ, ಸರ್ಕಾರ‌ ನಿಮ್ಮ‌ ಬೆನ್ನಿಗಿದೆ. ನೀವು ಇಟ್ಟ ವಿಶ್ವಾಸಕ್ಕೆ ಯಾವ ಸಂದರ್ಭದಲ್ಲಿಯೂ ಧಕ್ಕೆಯಾಗುವುದಿಲ್ಲ. ವ್ಯವಸ್ಥೆಯ ಬಗ್ಗೆ ನಂಬಿಕೆಯಿರಲಿ ಎಂದು ಧೈರ್ಯ ತುಂಬಿದರು. ಇದೇ ವೇಳೆ, ಶೌಚಾಲಯ ಸ್ವಚ್ಚಗೊಳಿಸಬೇಕೆಂಬ ಸೋಂಕಿತನ ಮಾತು ಆಲಿಸಿ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ನೈರ್ಮಲ್ಯ ಕಾಪಾಡಿಕೊಳ್ಳುವಂತೆ ಸೂಚಿಸಿದರು.

ಸದ್ಯ, 167 ಕೋವಿಡ್ ಸೋಂಕಿತರು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 26 ಜನ ವೆಂಟಿಲೇಟರ್ ಮೇಲಿದ್ದಾರೆ. ಐಸಿಯು ವಾರ್ಡ್ ನಲ್ಲಿ 47 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿರ್ದಾಕ್ಷಿಣ್ಯ ಕ್ರಮ

ಅಧಿಕಾರಿಗಳನ್ನುದ್ದೇಶಿಸಿದ‌ ಮಾತನಾಡಿದ ಸಚಿವರು, ಮೊನ್ನೆ ನಡೆದ ದುರ್ಘಟನೆಗೆ ಸಂಬಂಧಿಸಿದಂತೆ ಸರ್ಕಾರ‌ ನಿವೃತ್ತ ನ್ಯಾಯಾಧೀಶ ಜ. ಪಾಟೀಲ ಅವರ ನೇತ್ವತ್ವದಲ್ಲಿ ಇಂದು ವಿಚಾರಣಾ ಆಯೋಗ ಸ್ಥಾಪಿಸಿದೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾದ ಕ್ರಮವನ್ನು ಖಚಿತವಾಗಿಯೂ ಸರ್ಕಾರ ತೆಗೆದುಕೊಳ್ಳಲಿದೆ. ಇದೊಂದು ಎಚ್ಚರಿಕೆಯ ಗಂಟೆಯಾಗಬೇಕು. ಎಲ್ಲರೂ ಜವಾಬ್ದಾರಿಯನ್ನರಿತು ಶ್ರಮ ವಹಿಸಿ ಸಾರ್ವಜನಿಕ ಸೇವೆ ಮಾಡಬೇಕು ಎಂದು ಸೂಚನೆ ನೀಡಿದರು.

Last Updated : May 5, 2021, 9:11 PM IST

ABOUT THE AUTHOR

...view details