ಚಾಮರಾಜನಗರ: ವಿಚಾರ ಇದ್ದರೇ ಅದನ್ನು ಎಲ್ಲಿ ಹೇಳಬೇಕೋ ಅಲ್ಲಿ ಹೇಳಬೇಕು. ಪಕ್ಷಕ್ಕೊಂದು ಚೌಕಟ್ಟಿರಲಿದೆ ಎಂಬುದನ್ನು ತಿಳಿದಿರಬೇಕು ಎಂದು ವಿಜಯೇಂದ್ರ ಭ್ರಷ್ಟಾಚಾರ ನಡೆಸಿದ್ದಾರೆನ್ನಲಾದ ಹೆಚ್.ವಿಶ್ವನಾಥ್ ಸುದ್ದಿಗೋಷ್ಠಿಗೆ, ಸಚಿವ ಸುರೇಶ್ ಕುಮಾರ್ ತಿರುಗೇಟು ನೀಡಿದರು. ವಿಶ್ವನಾಥ್ ಬಹಳ ದೊಡ್ಡವರು, ಬುದ್ಧಿವಂತರು, ಪುಸ್ತಕ ಬರೆದಿರುವವರು ಇವೆಲ್ಲಾ ಗೊತ್ತಿರಬೇಕು. ಅವರ ಹೇಳಿಕೆಗಳು ಲಕ್ಷಾಂತರ ಕಾರ್ಯಕರ್ತರಿಗೆ ನೋವುಂಟು ಮಾಡಿದೆ. ವಿಚಾರ ಇದ್ದರೇ ಅದನ್ನು ಎಲ್ಲಿ ಹೇಳಬೇಕೋ ಅಲ್ಲಿ ಹೇಳಬೇಕೆಂದು ಹೆಚ್.ವಿಶ್ವನಾಥ್ ಆರೋಪಕ್ಕೆ ಟಾಂಗ್ ನೀಡಿದರು.
ಸಚಿವರೊಟ್ಟಿಗೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಮಾಲೋಚನೆ ನಡೆಸಿದ್ದು, ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಬಗ್ಗೆ ಮಾರ್ಗದರ್ಶನ ಮಾಡಿದ್ದಾರೆ. ಸಂಘಟನೆ ಕುರಿತು ಸಲಹೆಗಳನ್ನು ನೀಡಿದ್ದಾರೆ, ಇಂದು ಕೋರ್ ಕಮಿಟಿ ಸಭೆ ನಡೆಯುತ್ತಿದ್ದು, ಹಲವು ವಿಚಾರಗಳು ಚರ್ಚೆಗೆ ಬರಲಿವೆ ಎಂದು ಮಾಹಿತಿ ನೀಡಿದರು. ಚಾಮರಾಜನಗರ ಪಾಸಿಟಿವಿಟಿ ರೇಟ್ ಶೇ.6ರಷ್ಟಿದ್ದು, ಅದು ಶೇ.5 ರೊಳಗೆ ಬರುವ ವಿಶ್ವಾಸವಿದೆ.
ಅನ್‌ಲಾಕ್ ಆಗಿದ್ದರೂ ಲಾಕ್ಡೌನ್ನಲ್ಲೇ ಇದ್ದ 11 ಜಿಲ್ಲೆಗಳನ್ನು ಅನ್‌ಲಾಕ್ ಮಾಡುವ ಬಗ್ಗೆ ಚರ್ಚೆಯಾಗುತ್ತಿದೆ. ಈಗ ಕೊರೊನಾ ಅಬ್ಬರ ಕಡಿಮೆಯಾಗಿದೆ. ವ್ಯಾಕ್ಸಿನೇಷನ್‌ನ ವ್ಯಾಪಕವಾಗಿ ಮಾಡುವುದು ನಮ್ಮ ಗುರಿ. ಸೆಪ್ಟೆಂಬರ್ ಒಳಗೆ ಸಾಕಷ್ಟು ಮಂದಿಗೆ ಲಸಿಕೆ ನೀಡಿದರೆ 3ನೇ ಅಲೆ ಎದುರಿಸಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.
ಕೊರೊನಾ ಮುಕ್ತ ಗ್ರಾಮ ಪಂಚಾಯತ್ : ನಮ್ಮ ಎಲ್ಲ ಯಶಸ್ವಿ ಕಾರ್ಯಗಳ ಹಿಂದೆ ಬಿಳಿಗಿರಿ ರಂಗನಾಥನ ಆಶೀರ್ವಾದ ಇದೆ. ಭಗವಂತನ ಆಶೀರ್ವಾದದಿಂದ ಇನ್ನಷ್ಟು ಯಶಸ್ವಿ ಕಾರ್ಯವನ್ನು ಮಾಡೋಣ. ಬಿಳಿಗಿರಿ ರಂಗನಬೆಟ್ಟ ಗ್ರಾಪಂ ಕೊರೊನಾ ಮುಕ್ತ ಗ್ರಾಮ ಆಗಿರುವುದು ಸಂತಸದ ವಿಷಯ ಎಂದು ಸಚಿವರು ಇಂದು ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲಿ ತಿಳಿಸಿದರು.
ದೇಶದಲ್ಲಿ ಯಾವುದೇ ಒಂದು ಲಸಿಕೆ ಬಂದಾಗಲೂ ವಿರೋಧಗಳು ಅಪ ಪ್ರಚಾರಗಳು ಎದುರಾಗುವುದು ಸಹಜ. ಅವೆಲ್ಲವನ್ನೂ ಎದುರಿಸಿದ ಪರಿಣಾಮವೇ ಇಂದು ನಮ್ಮ ದೇಶ ಪೋಲಿಯೋ ಮುಕ್ತ ಭಾರತ ಎಂದು ಆಗಿದೆ. ಅದರಂತೆ ಕೊರೊನಾ ಸೋಂಕು ತಡೆಯಲು ಲಸಿಕೆ ಬಹಳಷ್ಟು ಮಹತ್ವ ಪಡೆದುಕೊಂಡಿದೆ. ಹೀಗಾಗಿ, ಬಿಳಿಗಿರಿ ರಂಗನಬೆಟ್ಟ ಗ್ರಾಪಂ ಸದಸ್ಯರೆಲ್ಲರೂ ಮುಂದೆ ನಿಂತು ತಮ್ಮ ವ್ಯಾಪ್ತಿಯ ಗ್ರಾಮ ಹಾಗೂ ಪೋಡುಗಳ ಜನರಿಗೆ ಲಸಿಕೆ ಹಾಕಿಸಬೇಕು ಎಂದು ಸೂಚಿಸಿದರು.