ಚಾಮರಾಜನಗರ:ಉಪ್ಪಿನ ಗೊಂಬೆ ಸಮುದ್ರದಾಳ ನೋಡಿದಂತೆ ಸಿದ್ದರಾಮಯ್ಯ ಸಾವರ್ಕರ್ ಬಗ್ಗೆ ಮಾತನಾಡಿದ್ದಾರೆ. ಅದು ಅವರ ಪರಿಸ್ಥಿತಿ ಎಂದು ಸಚಿವ ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸುರೇಶ್ ಕುಮಾರ್ ಚಾಮರಾಜನಗರ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಲು ನಗರಕ್ಕಾಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಇದು ಕಾಂಗ್ರೆಸ್ನವರ ಇತಿಹಾಸ, ಅವರಿಗೆ ಬೇಕಾದಂತೆ ತಿರುಚುತ್ತಾರೆ. ಸಾವರ್ಕರ್ ಎಂತಹ ಮಹಾನ್ ವ್ಯಕ್ತಿ ಎಂಬುದು ಸಿದ್ದರಾಮಯ್ಯಗೆ ಗೊತ್ತಿಲ್ಲ ಎಂದರು.
ಅಂಡಮಾನಿಗೆ ಯಾರು ಹೋಗುತ್ತಾರೆ, ಅಲ್ಲಿನ ಸೆಲ್ಯೂಲರ್ ಜೈಲಿಗೆ ಭೇಟಿ ಕೊಟ್ಟವರಿಗೆ ಸಾವರ್ಕರ್ ಎಂತ ದೊಡ್ಡ ಮನುಷ್ಯ ಎಂಬುದು, ಸಾವರ್ಕರ್ ಚಿಂತಿಸದಿದ್ದರೇ ಇಂದಿಗೂ ಮೊದಲ ಸ್ವಾತಂತ್ರ್ಯ ಸಂಗ್ರಾಮ ಸಿಪಾಯಿ ದಂಗೆಯಾಗುತ್ತಿತ್ತು. ಸಿದ್ದರಾಮಯ್ಯ ಅಂಡಮಾನಿಗೆ ಹೋಗಿಲ್ಲ ಪ್ರಾಯಶಃ ಹೋಗಿದ್ದರೂ ಮೋಜು-ಮಸ್ತಿಗಾಗಿ ಹೋಗಿರುತ್ತಾರೆ ಎಂದು ವ್ಯಂಗ್ಯವಾಡಿದರು.
ಸಾವರ್ಕರ್ ಬಗ್ಗೆ ಕೀಳಾಗಿ, ಕ್ಷುಲ್ಲಕವಾಗಿ ಮಾತನಾಡುವರ ಬಗ್ಗೆ ನನಗೆ ಕನಿಕರ ಬರಲಿದೆ, ಅಯ್ಯೋ ಅನಿಸಲಿದೆ. ಗಾಂಧಿ ಹತ್ಯೆಯ ಪ್ರಕರಣದಲ್ಲಿ ಸಾವರ್ಕರ್ ಪಾತ್ರ ನಿರೂಪಿಸಲಾಗಿಲ್ಲ, ಗಾಂಧಿ ಮತ್ತು ಸಾವರ್ಕರ್ ನಡುವೆ ವಿಭಿನ್ನ ಸಿದ್ದಾಂತದ ಸಂಘರ್ಷವಿದ್ದರೂ ಹತ್ಯೆ ಮಾಡುವ ಮಟ್ಟವಲ್ಲ ಎಂದರು.
ಪಕ್ಷದ ಸಂಘಟನಾ ದೃಷ್ಟಿಯಿಂದ ನಗರ, ಗ್ರಾಮಾಂತರ ಹೀಗೆ ಜಿಲ್ಲೆಗಳನ್ನು ವರ್ಗೀಕರಿಸಲಾಗಿದೆ. ಆಡಳಿತಾತ್ಮಕ ಜಿಲ್ಲೆಗಳು ಮತ್ತು ನಮ್ಮ ಸಂಘಟನಾತ್ಮಕ ಜಿಲ್ಲೆಗಳ ಸಂಖ್ಯೆ ಜೊತೆ ನೋಡಿದಾಗ ಗೊಂದಲ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಜಿಲ್ಲೆಗಳ ತಪ್ಪು ಲೆಕ್ಕಕ್ಕೆ ಸಮಜಾಯಿಷಿ ಕೊಟ್ಟರು.
ಇನ್ನು, ಎಚ್.ವಿಶ್ವನಾಥ್ ಹಾಗೂ ಸಾ.ರಾ.ಮಹೇಶ್ ನಡುವಿನ ಆಣೆ ಪ್ರಹಸನಕ್ಕೆ ಪ್ರತಿಕ್ರಿಯಿಸಿ, ಇಬ್ಬರೂ ಅನುಭವಿಗಳು, ಮಾಜಿ ಸಚಿವರುಗಳು ನಾನು ಖುದ್ದಾಗಿ ಇಬ್ಬರೊಂದಿಗೆ ಮಾತನಾಡಿದ್ದೇ ಈ ಆಣೆ- ಪ್ರಮಾಣ ಬಿಟ್ಡುಬಿಡಿ ಎಂದು ಹೇಳಿದ್ದೆ. ಅವರಿಬ್ಬರ ಮಾತಿನ ವಿನಿಮಯ ನನಗೆ ಸರಿ ಎನಿಸುತ್ತಿಲ್ಲ, ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಆಣೆ ಭಕ್ತರಿಂದ ನನ್ನನ್ನು ರಕ್ಷಿಸು ಎಂದು ಚಾಮುಂಡೇಶ್ವರಿ ಅಂದುಕೊಳ್ಳುತ್ತಿರಬಹುದು ಎಂದರು.
ಇದೇ ವೇಳೆ, ಮಹಾರಾಷ್ಟ್ರಕ್ಕೆ ನೀರು ಬಿಡುತ್ತೇನೆಂದು ಸಿಎಂ ಆಶ್ವಾಸನೆಗೆ ಪ್ರತಿಕ್ರಿಯಿಸಿ, ಆ ವಿಚಾರವನ್ನು ಮಾಧ್ಯಮಗಳಿಂದ ತಿಳಿದುಕೊಂಡೆ, ಯಾವ ಹಿನ್ನೆಲೆಯಲ್ಲಿ ಅವರು ಹೇಳಿದ್ದಾರೆಂಬ ಪೂರ್ಣ ಮಾಹಿತಿ ಇಲ್ಲ ಎಂದು ಉತ್ತರಿಸಿದರು.