ಚಾಮರಾಜನಗರ: ಜಿಲ್ಲೆಯ ಕೋವಿಡ್ ತಡೆ ಉಸ್ತುವಾರಿ ಹೊತ್ತಿರುವ ಸಚಿವ ಸೋಮಶೇಖರ್ ಇಂದು ಕೇರಳ - ತಮಿಳುನಾಡು ಗಡಿ ಭಾಗಕ್ಕೆ ಹೊಂದಿಕೊಂಡಿರುವ ಕೆಕ್ಕನಹಳ್ಳ ಚೆಕ್ ಪೋಸ್ಟ್ಗೆ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲನೆ ನಡೆಸಿದರು.
ಈ ವೇಳೆ, RTPCR ನೆಗೆಟಿವ್ ವರದಿ ಇಲ್ಲದೇ ಬಂದಿದ್ದ ಲಾರಿ ಚಾಲಕನನ್ನು ಕಂಡ ಸಚಿವ ಸೋಮಶೇಖರ್ ಕೆಂಡಾಮಂಡಲರಾಗಿ, ಇಷ್ಟೆಲ್ಲಾ ಬಿಗಿ ನಿಯಮ ಹಾಕಿದ್ದರೂ ಆತ ಬಂದಿದ್ದಾನೆಂದರೆ ನೀವು ಬಿಡುತ್ತೀದ್ದೀರಿ ಎಂದರ್ಥ, ಯಾರ ಬಳಿ ನೆಗೆಟಿವ್ ರಿಪೋರ್ಟ್ ಇಲ್ಲಾ ಅವರನ್ನು ಹಿಂದಕ್ಕೆ ಕಳುಹಿಸಿ, ನೆಗೆಟಿವ್ ರಿಪೋರ್ಟ್ ವರದಿ ಇಲ್ಲದವರನ್ನು ರಾಜ್ಯ ಪ್ರವೇಶಿಸಲು ಬಿಟ್ಟರೇ ನಿಮ್ಮನ್ನು ಸಸ್ಪೆಂಡ್ ಮಾಡುತ್ತೇನೆ ಎಂದು ಎಚ್ಚರಿಸಿದರು.
ಚೆಕ್ಪೋಸ್ಟ್ಗೆ ಭೇಟಿ ನೀಡಿದ ಸಚಿವ ಸೋಮಶೇಖರ್ ಅಂತಾರಾಜ್ಯದಿಂದ ವಾಹನಗಳಲ್ಲಿ ಬರುವವರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿಯನ್ನು ತಂದಿರಬೇಕು. ಒಂದು ವೇಳೆ ತರದೇ ಇದ್ದರೆ ಮುಲಾಜಿಲ್ಲದೇ ಅವರನ್ನು ವಾಪಸ್ ಕಳುಹಿಸಿ ಎಂದು ಡಿಸಿ, ಎಸ್ಪಿ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಸಚಿವರು ಮಾತನಾಡಿ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೆ ಹೆಚ್ಚಳವಾಗುತ್ತಿದೆ. ಅಲ್ಲಿರುವ ಸೋಂಕು ನಮ್ಮ ರಾಜ್ಯಗಳಿಗೆ ವ್ಯಾಪಿಸದಂತೆ ಕ್ರಮ ವಹಿಸಬೇಕಿದೆ ಎಂದು ತಿಳಿಸಿದರು.
ಅಂತಾರಾಜ್ಯ ವಹಿವಾಟು ಸೇರಿದಂತೆ ಯಾವುದೇ ರೀತಿಯ ವ್ಯಾಪಾರಗಳಿಗೆ, ಇನ್ನಿತರ ಚಟುವಟಿಕೆಗೆ ತೊಂದರೆಯಾಗಬಾರದು. ಆದರೆ, ಕೋವಿಡ್ ನಿಯಂತ್ರಣ ಸಂಬಂಧ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ. ಜೊತೆಗೆ, ಗಡಿಯಂಚಿನ ಗ್ರಾಮಗಳಲ್ಲಿ ಲಸಿಕೆಯನ್ನು ಎಲ್ಲರಿಗೂ ಆದಷ್ಟು ಶೀಘ್ರ ಕೊಡಬೇಕೆಂದು ಸೂಚಿಸಿರುವುದಾಗಿ ತಿಳಿಸಿದರು.