ಚಾಮರಾಜನಗರ:ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ವಿ.ಸೋಮಣ್ಣ ಅವರು ಬುಧವಾರ ಅಧಿಕಾರಿಗಳೊಂದಿಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮೊದಲ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಎಲ್ಲಾ ಇಲಾಖೆಯ ಮುಖ್ಯಾಧಿಕಾರಿಗಳು, ನಗರಸಭೆ ಆಯುಕ್ತರಿಗೆ ಬೆಂಡೆತ್ತಿ, ಚಾಟಿ ಬೀಸಿದರು.
ಎಲ್ಲರೂ ಮೊದಲು ತಮ್ಮ-ತಮ್ಮನ್ನು ಪರಿಚಯಿಸಿಕೊಳ್ಳಿ ಎಂದು ಸಚಿವ ಸೋಮಣ್ಣ ಸೂಚಿಸುತ್ತಿದ್ದಂತೆ, ಅಧಿಕಾರಿಗಳು ಎದ್ದು ನಿಂತು ತಮ್ಮ ಹೆಸರು, ಇಲಾಖೆ ಬಗ್ಗೆ ಹೇಳುತ್ತಿದ್ದಂತೆ ನೀನಿನ್ನು ಚುರುಕಾಗಬೇಕು. ನಿನ್ನ ಕೆಲಸ ಸಾಲಲ್ಲ, ಇನ್ನೂ ಇಂಪ್ರೂವ್ ಆಗಬೇಕು ಎಂದು ಮೇಷ್ಟ್ರ ರೀತಿ ಪಾಠ ಮಾಡಿದರು.
ಅಧಿಕಾರಿಗಳು ಪರಿಚಯಿಸಿಕೊಳ್ಳುವ ವೇಳೆ ಎಲ್ಲಿ ವಾಸ್ತವ್ಯ ಮಾಡುತ್ತೀದ್ದೀರಾ ಎಂಬ ಪ್ರಶ್ನೆ ಕೇಳುತ್ತಿದ್ದ ಸಚಿವರು, ಮೈಸೂರಿನಲ್ಲಿ ಉಳಿದುಕೊಂಡಿದ್ದೇನೆ, ಇಲ್ಲೂ ಮನೆ ಮಾಡಿದ್ದೇನೆ ಎಂದು ಕೆಲ ಅಧಿಕಾರಿಗಳು ಉತ್ತರಿಸುತ್ತಿದ್ದಂತೆ ಮಿನಿಸ್ಟರ್ ಗರಂ ಆದ್ರು. ನೀವು ಕೆಲ್ಸ ಮಾಡುವುದು ಇಲ್ಲಿ- ಉಳಿಯುವುದು ಮಾತ್ರ ಅಲ್ಲಾ, ಇದ್ರೆ ಇಲ್ಲಿರಿ, ಇಲ್ಲಾಂದ್ರೆ ಬೇರೆ ಜಿಲ್ಲೆಗೆ ಹೋಗಿ, ಬಲವಂತ ಮಾಡಲ್ಲ. ನಿಮಗೇನಾದರೂ ಸಮಸ್ಯೆ ಇದ್ದರೆ ಪರಿಹರಿಸುತ್ತೇವೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲೆಯಲ್ಲೇ ಉಳಿಯಬೇಕು. ಮುಂದಿನ ತಿಂಗಳು 4 ರ ಒಳಗೇ ಇಲ್ಲಿ ಮನೆ ಮಾಡಬೇಕು ಎಂದು ತಾಕೀತು ಮಾಡಿದರು.
ಮಹಿಳಾ ಅಧಿಕಾರಿಗಳಿಗೂ ಬೆವರಿಳಿಸಿದ ಸೋಮಣ್ಣ: ಮಗನಿಗೆ ಆರೋಗ್ಯ ತೊಂದರೆಯಾಗುತ್ತಿರುವ ಹಿನ್ನೆಲೆ ಮೈಸೂರಿನಲ್ಲಿ ಇರುವುದಾಗಿ ಹೇಳಿದ ಕೃಷಿ ಜೆಡಿ ಚಂದ್ರಕಲಾ ಅವರನ್ನೂ ತರಾಟೆಗೆ ತೆಗೆದುಕೊಂಡ ಸಚಿವರು, "ನೋಡಮ್ಮ, ಬೇಕಾದ್ರೆ ನನ್ನ ಮೈಸೂರಿನ ಮನೆಯನ್ನೇ ತಗೊ, ಮಗನ ಆರೋಗ್ಯ ಸಮಸ್ಯೆ ಬಗ್ಗೆ ಪರಿಹಾರ ಮಾಡುತ್ತೇನೆ. ಆದ್ರೆ ವಾರದಲ್ಲಿ ನಾಲ್ಕು ದಿನವಾದರೂ ಜಿಲ್ಲಾ ಕೇಂದ್ರದಲ್ಲೇ ಇರಬೇಕಮ್ಮ" ಎಂದು ಸೂಚಿಸಿದರು.
ಡಿಡಿಎಲ್ ಆರ್ ಮಾತನಾಡಿ, ತನ್ನ ಪತಿ ಮೈಸೂರಿನಲ್ಲಿ ಪ್ರಾಧ್ಯಾಪಕರಾಗಿರುವ ಹಿನ್ನೆಲೆ ಮೈಸೂರಿನಲ್ಲೇ ವಾಸ್ತವ್ಯ ಮಾಡುತ್ತಿರುವುದಾಗಿ ಹೇಳಿದ್ದಕ್ಕೆ ಗರಂ ಆದ ಸೋಮಣ್ಣ, "ನೋಡಮ್ಮ, ನಿಮ್ಮದು ಜವಾಬ್ದಾರಿ ಹುದ್ದೆ, ನೀ ಇಲ್ಲೇ ಉಳಿದುಕೊಂಡರೇ, ನಿಮ್ಮ ಯಜಮಾನ್ರೆ ನಿನ್ನನ್ನು ಹುಡುಕಿಕೊಂಡು ಇಲ್ಲಿಗೆ ಬರುತ್ತಾರೆ., ನೀ ಇಲ್ಲೇ ಇರಮ್ಮ. ನಿಮ್ಮ ಯಜಮಾನರ ನಂಬರ್ ಕೊಡು ನಾನು ಮಾತನಾಡಿ ಹೇಳುತ್ತೇನೆ. ನಿಮ್ಮ ಮಕ್ಕಳನ್ನು ಬೇಕಾದರೆ ನನಗೆ ದತ್ತು ಕೊಡಮ್ಮ, ಮನೆಯಲ್ಲಿ ನಾನು ನನ್ನ ಹೆಂಡತಿ ಇಬ್ರೇ ಇರೋದು ಚೆನ್ನಾಗಿ ಸಾಕ್ತೀವಿ, ನೀ ಇಲ್ಲೇ ಇರಬೇಕು ಎಂದು ಸೂಚಿಸಿದರು.