ಚಾಮರಾಜನಗರ: ಕರ್ನಾಟಕದಲ್ಲಿ ಅವಕಾಶ ಇದ್ದಾಗಲೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಲಿಲ್ಲ, ಇನ್ನು ಪಿಎಂ ಮಾಡ್ತಾರಾ ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ವ್ಯಂಗ್ಯವಾಡಿದರು. ಚಾಮರಾಜನಗರದಲ್ಲಿ ಇಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲಲ್ಲಿದೆ ಎಂಬುದು ಗ್ಯಾರಂಟಿ ಇಲ್ಲ. ಯಾವ ಸಂದರ್ಭದಲ್ಲಿ ನನ್ನನ್ನು ಪಿಎಂ ಅಭ್ಯರ್ಥಿ ಮಾಡ್ತಿದೀರಾ ಎಂದು ಸ್ವತಃ ಖರ್ಗೆ ಅವರೇ ಹೇಳಿದ್ದಾರೆ. ಇದರ ಬಗ್ಗೆ ಕಾಂಗ್ರೆಸಿಗರೇ ಚರ್ಚಿಸಲಿ ಎಂದರು.
ಸಂಸತ್ ಆವರಣದಲ್ಲಿ ವಿಪಕ್ಷ ಉಪರಾಷ್ಟ್ರಪತಿಯನ್ನು ಮಿಮಿಕ್ರಿ ಮಾಡಿದ ವಿವಾದದ ಕುರಿತು ಮಾತನಾಡುತ್ತಾ, ನಾಗರಿಕರನ್ನು ಯಾರೂ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ. ಯಾವ ರೀತಿ ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಅವರನ್ನು ಮಿಮಿಕ್ರಿ ಮಾಡಿದ್ರು ಅನ್ನೋದನ್ನು ಜನ ನೋಡಿದ್ದಾರೆ. ಅದನ್ನು ಯಾವ ರೀತಿ ರಾಹುಲ್ ಗಾಂಧಿ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ್ದಾರೆ ಎಂಬುದನ್ನೂ ನೋಡಿದ್ದಾರೆ. ಸಂಸದರು, ಶಾಸಕರನ್ನು ಸಂಭೋದಿಸುವುದು ಒಂದು ಭಾಗ. ಆದರೆ ರಾಷ್ಟ್ರಪತಿ, ಉಪರಾಷ್ಟ್ರಪತಿ ಅವರನ್ನು ಯಾವ ರೀತಿ ಸಂಭೋದಿಸಬೇಕು ಎಂಬ ಪರಿಜ್ಞಾನ ಕಾಂಗ್ರೆಸ್ಗೆ ಇರಬೇಕಿತ್ತು ಎಂದು ಹೇಳಿದರು.
ಒಳ ಮೀಸಲಾತಿ ಕುರಿತು ಮಾತನಾಡಿ, ಜ.17 ರಂದು ಸುಪ್ರೀಂ ಕೋರ್ಟ್ನಲ್ಲಿ ಒಳ ಮೀಸಲಾತಿ ಸಂಬಂಧ ವಿಚಾರಣೆ ನಡೆಯಲಿದೆ. ಫೆಬ್ರವರಿಯಲ್ಲಿ ಮಾದಿಗರ ಪರವಾಗಿ ಆದೇಶ ಹೊರಬೀಳುವ ವಿಶ್ವಾಸವಿದೆ. ದಕ್ಷಿಣ ಭಾರತದ ಮಾದಿಗರ ಒಳ ಮೀಸಲಾತಿ ಪರವಾಗಿ ಕೇಂದ್ರ ಸರ್ಕಾರ ಇದೆ ಎಂದರು.