ಜಿಲ್ಲಾ ಉಸ್ತುವಾರಿ ಸಚಿವ ಕೆ ವೆಂಕಟೇಶ್ ಚಾಮರಾಜನಗರ :ಭ್ರೂಣ ಹತ್ಯೆಯಂತಹ ದ್ರೋಹದ ಕೆಲಸ ಮತ್ತೊಂದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ವೆಂಕಟೇಶ್ ಅವರು ಹೇಳಿದರು. ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಭ್ರೂಣ ಹತ್ಯೆ ಮಾಡಿದವರ ಜೊತೆಗೆ ಭ್ರೂಣ ಹತ್ಯೆಗೆ ಒಳಗಾದವರಿಗೂ ಕಠಿಣ ಶಿಕ್ಷೆ ಆಗಬೇಕು. ಆಗ ಮಾತ್ರ ಈ ರೀತಿ ಪಾಪದ ಕೃತ್ಯ ನಿಲ್ಲಲ್ಲಿದೆ. ಈ ಘಟನೆ ಬೆಳಕಿಗೆ ಬಂದ ನಂತರ ಸರ್ಕಾರ ಹಲವು ಕ್ರಮ ತೆಗೆದುಕೊಂಡಿದೆ ಎಂದರು.
ಇನ್ನು ಚೀನಾದಲ್ಲಿ ನ್ಯುಮೋನಿಯಾ ಸೋಂಕು ಹೆಚ್ಚಳವಾದ ಸಂಬಂಧ ರಾಜ್ಯವು ಕೂಡ ಎಚ್ಚೆತ್ತುಕೊಂಡಿದೆ. ಜಿಲ್ಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಚೆಕ್ ಪೋಸ್ಟ್ಗಳಲ್ಲಿ ತಪಾಸಣೆ, ವಿಶೇಷ ವಾರ್ಡ್ಗಳನ್ನು ರೂಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಜಾತಿ ಗಣತಿ ವರದಿ ಬಿಡುಗಡೆಯಾದ ಬಳಿಕ ಸರ್ಕಾರ ಪತನ ಆಗುತ್ತದೆ ಹಾಗೂ ಲೋಕಸಭಾ ಚುನಾವಣೆಗೂ ಮುನ್ನ ಡಿಕೆಶಿ ಜೈಲಿಗೆ ಹೋಗುತ್ತಾರೆ ಎಂಬ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಟೀಕೆಗೆ ಉತ್ತರಿಸಿ, ಈಶ್ವರಪ್ಪ ಮನಸ್ಸಿಗೆ ಬಂದಂತೆ ಏನೇನೋ ಮಾತನಾಡುತ್ತಾರೆ. ಅವರ ಹೇಳಿಕೆ ನಮ್ಮ ಅಧ್ಯಕ್ಷರನ್ನ ಉದ್ದೇಶಪೂರ್ವಕವಾಗಿ ಜೈಲಿಗೆ ಹಾಕಿಸುವ ಹುನ್ನಾರದಂತಿದೆ. ಈಶ್ವರಪ್ಪ ಅವರ ಹೇಳಿಕೆ ಹಿಂದೆ ಷಡ್ಯಂತ್ರ ಅಡಗಿದೆ. ಯಾರು ಏನೇ ಅಂದರೂ ಸರ್ಕಾರ ಐದು ವರ್ಷ ಸುಭದ್ರವಾಗಿರಲಿದೆ ಎಂದರು.
ಇನ್ನು ಸುರ್ಜೇವಾಲ ರಾಜ್ಯಕ್ಕೆ ವಸೂಲಿಗೆ ಬರುತ್ತಾರೆ ಎಂಬ ಬಿಜೆಪಿಯವರ ಆರೋಪದ ಬಗ್ಗೆ ಮಾತನಾಡಿ, ಸುರ್ಜೇವಾಲ ರಾಜ್ಯದ ಉಸ್ತುವಾರಿ ಆಗಿದ್ದಾರೆ. ಅವರು ಫ್ಲೈಟಲ್ಲಿ ದುಡ್ಡು ಹಿಡಿದುಕೊಂಡು ಹೋಗಲು ಆಗುತ್ತಾ?. ಬಿಜೆಪಿಯವರ ಆಪಾದನೆಗಳಿಗೆ ಅರ್ಥವಿಲ್ಲ ಎಂದು ಕಿಡಿಕಾರಿದರು.
ತಿಂಗಳಿಗೆ 20 ರಿಂದ 25 ಹೆಣ್ಣು ಭ್ರೂಣ ಹತ್ಯೆ (ಬೆಂಗಳೂರು): ಹೆಣ್ಣು ಭ್ರೂಣ ಪತ್ತೆ ಹಾಗೂ ಗರ್ಭಪಾತದಲ್ಲಿ ಭಾಗಿಯಾಗಿದ್ದ ಪ್ರಕರಣದಲ್ಲಿ ಮತ್ತೆ ಐವರು ಆರೋಪಿಗಳನ್ನು ಬೈಯಪ್ಪನಹಳ್ಳಿ ಠಾಣಾ ಪೊಲೀಸರು (ನವೆಂಬರ್ 26-2023) ಸೆರೆ ಹಿಡಿದಿದ್ದರು. ಚೆನ್ನೈನ ಡಾ. ತುಳಸಿರಾಮ್, ಮೈಸೂರಿನ ಖಾಸಗಿ ಆಸ್ಪತ್ರೆಯ ವೈದ್ಯ ಡಾ. ಚಂದನ್ ಬಲ್ಲಾಳ್, ಆತನ ಪತ್ನಿ ಮೀನಾ, ಮೈಸೂರಿನ ಖಾಸಗಿ ಆಸ್ಪತ್ರೆಯ ಸ್ವಾಗತಕಾರ್ತಿ (ರಿಸೆಪ್ಶನಿಸ್ಟ್) ರಿಜ್ಮಾ, ಲ್ಯಾಬ್ ಟೆಕ್ನೀಶಿಯನ್ ನಿಸ್ಸಾರ್ ಬಂಧಿತರು ಎಂಬುದು ತಿಳಿದು ಬಂದಿತ್ತು.
ಈ ಜಾಲದ ಕುರಿತು ಮಾಹಿತಿ ಪಡೆದಿದ್ದ ಪೊಲೀಸರು ಕಳೆದ ಅಕ್ಟೋಬರ್‌ನಲ್ಲಿ ಶಿವನಂಜೇಗೌಡ, ವೀರೇಶ್, ನವೀನ್ ಕುಮಾರ್ ಮತ್ತು ನಯನ್ ಕುಮಾರ್ ಎಂಬವರನ್ನು ಬಂಧಿಸಿದ್ದರು. ಈ ಆರೋಪಿಗಳು ಗರ್ಭಿಣಿಯರನ್ನು ಗುರುತಿಸಿ ಮಂಡ್ಯದ ಆಲೆಮನೆಯೊಂದರಲ್ಲಿ ಸ್ಕ್ಯಾನ್ ಮಾಡಿಸುತ್ತಿದ್ದರು. ಬಳಿಕ ಹೆಣ್ಣು ಭ್ರೂಣವಾದರೆ ಗರ್ಭಪಾತ ಮಾಡಿಸುತ್ತಿದ್ದರು ಎಂಬುದು ತನಿಖೆಯಲ್ಲಿ ತಿಳಿದು ಬಂದಿತ್ತು.
ಇದನ್ನೂ ಓದಿ:ತಿಂಗಳಿಗೆ 20 ರಿಂದ 25 ಹೆಣ್ಣು ಭ್ರೂಣ ಹತ್ಯೆ: ವೈದ್ಯ ಸೇರಿ ಮತ್ತೆ ಐವರ ಬಂಧನ