ಚಾಮರಾಜನಗರ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಕಾರ್ಯ ವೈಖರಿಗೆ ಕಿಡಿಕಾರಿ ಕಾಮಗಾರಿ ಆರಂಭಿಸಲು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಒಂದು ವಾರದ ಗಡವು ನೀಡಿದ್ದಾರೆ.
ಜಿಲ್ಲಾಡಳಿತ ಭವನದ ಡಿಸಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುರಿತು ಅಧಿಕಾರಿಗಳ ಸಭೆ ನಡೆಸಿದ ಅವರು, ಈ ವಾರದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂಬ ಅಧಿಕಾರಿ ಉತ್ತರಕ್ಕೆ ಗರಂ ಆಗಿ ಮಾರ್ಚ್ ತಿಂಗಳಲ್ಲೇ ಮಾಡ್ತೀವಿ ಅಂತ ಹೇಳಿದ್ರಿ, ಜುಲೈ ಬಂದ್ರೂ ರಸ್ತೆ ಕಾಮಗಾರಿ ಮುಗಿತಿಲ್ಲ, 10 ದಿನದಲ್ಲಿ ಕ್ಲೀಯರ್ ಮಾಡ್ತೀನಿ ಅಂತ ಹೇಳ್ತೀರಿ ನೀವು ಚಿಕ್ಕಮಕ್ಕಳಾ? ನಿಮಗಿಂತ SSLC ವಿದ್ಯಾರ್ಥಿಗಳು ಚೆನ್ನಾಗಿ ಉತ್ತರ ಹೇಳುತ್ತಾರೆ ಎಂದು ಸಿಡಿಮಿಡಿಗೊಂಡರು.
ಸಂಸದರ ಬಳಿಕ ಹೆದ್ದಾರಿ ಕಾಮಗಾರಿಗೆ ಸಚಿವರ ಗಡವು ಇದೇ ವೇಳೆ, ತಮಿಳುನಾಡು ಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಳ್ಳಲು ಕೋವಿಡ್ ರಿಪೋರ್ಟ್ ಮಾಡಿಸಿಕೊಂಡು ಬನ್ನಿ ಎಂದು ಹೇಳಿದ್ದೆ ತೆಗೆದುಕೊಂಡು ಬಂದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಡಿಸಿ ಡಾ.ಎಂ.ಆರ್.ರವಿ ಕಿಡಿಕಾರಿದರು. ಬಳಿಕ, ಸಚಿವರು 8 ದಿನದೊಳಗೆ ಗುಂಡಿಗಳನ್ನು ಮುಚ್ಚುವ ಕಾರ್ಯ ಆರಂಭಿಸಿ ಮುಗಿಸಲು ಅಧಿಕಾರಿಗಳಿಗೆ ಗಡವು ನೀಡಿದರು.
ಈ ಹಿಂದೆ, ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ರಾಷ್ಟ್ರೀಯ ಹೆದ್ದಾರಿಯ ಗುಂಡಿಗಳನ್ನು ಮುಚ್ಚಲು 15 ದಿನದ ಕಾಲಮಿತಿ ನೀಡಿದ್ದರು. ಅದು ಕೂಡ ಪಾಲನೆಯಾಗಿಲ್ಲ, ಈಗ ಕಾಮಗಾರಿ ಪುನಾರಂಭಕ್ಕೆ ಸಚಿವರು ಒಂದು ವಾರದ ಗಡವು ನೀಡಿದ್ದು ಇದೇನಾಗುವುದೋ ಎಂಬುದನ್ನು ಕಾದು ನೋಡಬೇಕಿದೆ.