ಚಾಮರಾಜನಗರ: "ನಾನೇ ನನ್ನ ವಿರುದ್ಧ ಘೋಷಣೆ ಕೂಗಿಸಿಕೊಂಡು ಸಚಿವ ಸಂಪುಟದಲ್ಲಿ ಕೆಲಸ ಮಾಡಿಸಿಕೊಳ್ಳುತ್ತಿದ್ದೆ" ಎಂದು ಸಮಾಜ ಕಲ್ಯಾಣ ಸಚಿವ ಹೆಚ್ಸಿ ಮಹದೇವಪ್ಪ ಹೇಳಿದರು. ಚಾಮರಾಜನಗರದಲ್ಲಿ ನಡೆದ ಭೀಮ ಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, "1998ರಲ್ಲಿ 20 ಸಾವಿರ ಬ್ಯಾಕ್ ಲಾಗ್ ಹುದ್ದೆ ತುಂಬಿಸುವ ಸಂದರ್ಭದಲ್ಲಿ ನನ್ನ ಮನೆ ಮುಂದೆ ಧಿಕ್ಕಾರ ಕೂಗಿಸಿದ್ದೆ. ನನ್ನ ಮನೆ ಮುಂದೆ ಕುಳಿತು ಹೆಚ್ಸಿ ಮಹದೇವಪ್ಪರಿಗೆ ಧಿಕ್ಕಾರ ಕೂಗಿ ಅಂತ ಹೇಳುತ್ತಿದ್ದೆ. ಆಮೇಲೆ ಕ್ಯಾಬಿನೆಟ್ನಲ್ಲಿ ನನ್ನ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ ಎಂದು ಹೇಳಿ ಅಪ್ರೊವಲ್ ಮಾಡಿಸುತ್ತಿದ್ದೆ. ಈ ಗುಟ್ಟನ್ನು ನಾನು ಈಗ ಇಲ್ಲಿ ಹೇಳುತ್ತಿದ್ದೇನೆ" ಎಂದರು.
"ಹೆಚ್ಸಿ ಮಹದೇವಪ್ಪ, ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ಇರುವವರಗೆ ಎಸ್ಇಪಿ ಹಾಗೂ ಟಿಎಸ್ಪಿ ಹಣದಲ್ಲಿ ಒಂದು ರೂಪಾಯಿಯೂ ದುರುಪಯೋಗವಾಗಲು ಬಿಡಲ್ಲ. ಎಸ್ಸಿ, ಎಸ್ಟಿ ಯುವಕರಿಗೆ ಸುಮ್ಮನ್ನೇ ಕಂಟ್ರಾಕ್ಟರ್ ಲೈಸನ್ಸ್ ಕೊಟ್ಟಿಲ್ಲ, ಬೇರೆ ಬೇರೆ ಕಂಟ್ರಾಕ್ಟರ್ಗಳು ಜೇಬು ತುಂಬಾ ದುಡ್ಡು ಇಟ್ಟುಕೊಳ್ಳುತ್ತಿದ್ದರು. ಆದರೆ, ನಮ್ಮವರಿಗೆ ಊಟ ಮಾಡೋಕೆ ದುಡ್ಡು ಇರುತ್ತಿರಲಿಲ್ಲ. ಅವರ ಜೇಬು ಖಾಲಿ ಇರುತ್ತಿತ್ತು. ಅದಕ್ಕೆ ಕಂಟ್ರಾಕ್ಟರ್ ಮೀಸಲಾತಿ ತಂದೆವು" ಎಂದು ತಿಳಿಸಿದರು.
"ಅಂಬೇಡ್ಕರ್ ಸಿದ್ಧಾಂತವನ್ನು ಪ್ರಚಾರ ಮಾಡಬೇಕು. ಬಲವಾದ ಅಂಬೇಡ್ಕರ್ ವಾದ ಬೇಕು, ದೇಶದ ಸಂವಿಧಾನ ರಕ್ಷಣೆ ಮಾಡುವ ಕರ್ತವ್ಯ ನಮ್ಮ ಮೇಲಿದೆ, ಸಂವಿಧಾನ ರಕ್ಷಣೆ ಆದರೆ ನಾವು ರಕ್ಷಣೆಯಾಗುತ್ತೇವೆ ಅದಕ್ಕಾಗಿ ನಾವು ಒಗ್ಗಟ್ಟಾಗಬೇಕು" ಎಂದು ಕರೆ ನೀಡಿದರು.