ಪ್ರತಾಪ್ ಸಿಂಹಗೆ ಸಚಿವ ಹೆಚ್.ಸಿ.ಮಹದೇವಪ್ಪ ಟಾಂಗ್ ಚಾಮರಾಜನಗರ : ಅರ್ಥರಹಿತವಾದ ಮಾತುಗಳಿಗೆ ಪ್ರತಿಕ್ರಿಯಿಸಬೇಕಾದ ಅಗತ್ಯತೆ ಇಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ಸಂಸದ ಪ್ರತಾಪ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಎಲ್ಲಿ ಕಾನೂನಿನ ಉಲ್ಲಂಘನೆ ಆಗುತ್ತದೋ, ಎಲ್ಲಿ ಹಣಕಾಸು ದುರ್ಬಳಕೆ ಆಗಿದೆಯೋ ಅಲ್ಲಿ ನಮ್ಮ ಸರ್ಕಾರ ಬೇಕಾದ ಕ್ರಮಗಳನ್ನು ಕೈಗೊಳ್ಳುತ್ತದೆ. ಅಲ್ಲದೇ 40% ಕಮಿಷನ್ ವಿಚಾರವಾಗಿ ತನಿಖೆ ನಡೆಸುತ್ತೇವೆ" ಎಂದು ಹೇಳಿದರು. ಹೊಂದಾಣಿಕೆ ರಾಜಕಾರಣ ಯಾರು ಮಾಡಿದ್ದಾರೆ ಎಂದು ಅವರೇ ಹೇಳಬೇಕು. ನಮಗೆ ಏನು ಗೊತ್ತು, ಕಾಂಗ್ರೆಸ್ಗೆ ಏನು ಗೊತ್ತು ಎಂದು ಪ್ರತಿಕ್ರಿಯಿಸಿದರು.
ಹಣದ ಕ್ರೋಡೀಕರಣ ವಿಚಾರಕ್ಕೆ ಪ್ರತಿಕ್ರಿಯಿಸಿ, "ಹಣದ ಕ್ರೋಡೀಕರಣ ಹಣಕಾಸು ಇಲಾಖೆಗೆ ಸಂಬಂಧಿಸಿದೆ. ಸಿಎಂ ಸಿದ್ದರಾಮಯ್ಯ ಅವರು ಮೇಧಾವಿ ಆರ್ಥಿಕ ತಜ್ಞರಿದ್ದಾರೆ. ಅವರು ಈ ಬಗ್ಗೆ ಯೋಜನೆ ಮಾಡುತ್ತಾರೆ. ನಾವು ಹೇಗೆ ಮಾಡುತ್ತೇವೆಂದು ಎಂಬುದನ್ನು ಸಂಸದ ಪ್ರತಾಪ್ ಸಿಂಹ ಅವರಿಗೆ ಪ್ರತ್ಯೇಕವಾಗಿ ತಿಳಿಸುವ ಅಗತ್ಯವಿಲ್ಲ" ಎಂದು ಹೇಳಿದರು.
ವಿದ್ಯುತ್ ದರ ಏರಿಕೆ ಕುರಿತು ಮಾತನಾಡಿ, "ವಿದ್ಯುತ್ ದರ ಏರಿಕೆ ಮಾಡಿದ್ದು ಬಿಜೆಪಿ ಸರ್ಕಾರ. ಈಗ ಅವರೇ ಟೀಕೆ ಮಾಡಿದರೆ ಹೇಗೆ?. ಅವರು ಅನುಕೂಲಕ್ಕೆ ತಕ್ಕಂತೆ ಮಾತನಾಡುತ್ತಿದ್ದಾರೆ. ಅವರೇ ವಿದ್ಯುತ್ ದರ ಏರಿಕೆ ಮಾಡಿ ಈಗ ಅವರೇ ಟೀಕಿಸುವುದು ಎಷ್ಟು ಸರಿ" ಎಂದು ಪ್ರಶ್ನಿಸಿದರು.
ಇದನ್ನೂ ಓದಿ :ನುಡಿದಂತೆ ನಡೆದ ಸಿದ್ದರಾಮಯ್ಯ 'ಸ್ತ್ರೀ ಶಕ್ತಿ ಸ್ವಸಹಾಯ ಸಂಘ'ಗಳ ಸಾಲ ಮನ್ನಾ ಮಾಡ್ತಾರೆ.. ಫ್ಲೆಕ್ಸ್ ಹಿಡಿದು ಮಹಿಳೆಯರ ಪ್ರತಿಭಟನೆ
'ಸರ್ಕಾರ ಬಂದು 20 ದಿನ ಆಗಿದೆಯಷ್ಟೇ, ಪರ್ಸೆಂಟೇಜ್ ಎಲ್ಲಿಂದ ಬಂತು?': "ಸರ್ಕಾರ ಬಂದು 20 ದಿನ ಆಗಿಲ್ಲ. ಎಲ್ಲಿಂದ ಕಮಿಷನ್ ತೆಗೆದುಕೊಳ್ಳುವುದು" ಎಂದು ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸಚಿವ ವೆಂಕಟೇಶ್ ಟೀಕಾಪ್ರಹಾರ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸರ್ಕಾರ ಬಂದು ಇನ್ನೂ 20 ದಿನ ಆಗಿಲ್ಲ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಬಿಜೆಪಿಯವರದ್ದು 40% ಸರ್ಕಾರವಾದರೆ ಕಾಂಗ್ರೆಸ್ನವರದ್ದು 45% ಸರ್ಕಾರ ಎಂದು ಹೇಳಿದ್ದಾರೆ. ಅವರೇನೂ ತಿಳುವಳಿಕೆಯಿಂದ ಮಾತನಾಡುತ್ತಾರೋ, ಇಲ್ಲ ಸುಮ್ಮನೆ ಮಾತನಾಡುತ್ತಾರೋ ಗೊತ್ತಿಲ್ಲ. ಕುಮಾರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿ ಆಗಿದ್ದವರು, ಸ್ವಲ್ಪ ಜವಾಬ್ದಾರಿಯುತವಾಗಿ ಮಾತನಾಡಲಿ ಎಂದಷ್ಟೇ ನಾವು ಹೇಳಬಹುದು" ಎಂದರು.
ವಿದ್ಯುತ್ ದರ ಏರಿಕೆ ಕುರಿತು ಮಾತನಾಡಿ, "ಬಿಜೆಪಿ ಅವರು ಅನುಕೂಲಕ್ಕೆ ತಕ್ಕಂತೆ ಮಾತನಾಡುತ್ತಿದ್ದಾರೆ, ಅವರಿದ್ದಾಗ ದರ ಏರಿಸಿ ಈಗ ಇಳಿಸಿ ಎಂದು ನಮಗೆ ಹೇಳುತ್ತಿದ್ದಾರೆ, ಚುನಾವಣೆ ವೇಳೆಯೇ ಬಿಜೆಪಿ ಅವರು ದರ ಏರಿಕೆ ಮಾಡಿದ್ದರು" ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ :ಸರ್ಕಾರಿ ಆಸ್ಪತ್ರೆಗೆ ಜನ ಬರಬೇಕೋ ಬೇಡ್ವೋ: ಮೂರು ತಿಂಗಳಲ್ಲಿ ವ್ಯವಸ್ಥೆ ಸರಿಪಡಿಸುವಂತೆ ಸಿಎಂ ಸೂಚನೆ