ಚಾಮರಾಜನಗರ: ಧರ್ಮ ಬಿಟ್ಟು ರಾಜಕಾರಣ ಇಲ್ಲ. ರಾಜಕಾರಣ ಬಿಟ್ಟು ಧರ್ಮ ಇಲ್ಲ. ಹಿಂದೆ ರಾಜಗುರುಗಳಿದ್ದರು. ಈಗ ಸಮುದಾಯಗಳ ಸ್ವಾಮೀಜಿಗಳಿದ್ದಾರೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ವ್ಯಾಖ್ಯಾನಿಸಿದರು. ಚಾಮರಾಜನಗರದಲ್ಲಿ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ರು. ಭಾರತದಲ್ಲಿ ಪ್ರತಿಯೋರ್ವ ನಾಗರಿಕನಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಕೆಲ ಸ್ವಾಮೀಜಿಗಳು ಬಿಎಸ್ವೈ ಪರ ಮಾತನಾಡಿದ್ದಾರಷ್ಟೇ.. ಧರ್ಮ ಬಿಟ್ಟು ರಾಜಕಾರಣ ಇಲ್ಲ- ರಾಜಕಾರಣ ಬಿಟ್ಟು ಧರ್ಮ ಇಲ್ಲ. ಅವರವರ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಸಿಎಂ ಬದಲಾವಣೆ ಕುರಿತು ಮಾತನಾಡಿ, ಒಂದು ವಾರಗಳಿಂದ ಹೇಳುತ್ತಿದ್ದೇನೆ, ಯಾವುದೇ ರೀತಿಯ ಮುಖ್ಯಮಂತ್ರಿ ಬದಲಾವಣೆ ಇಲ್ಲ, ಇನ್ನು ಎರಡು ವರ್ಷ ಅವರೇ ಸಿಎಂ, ಮುಂದಿನ ಚುನಾವಣೆಯನ್ನೂ ಯಡಿಯೂರಪ್ಪ ನೇತೃತ್ವದಲ್ಲೇ ನಡೆಸುತ್ತೇವೆ. ಅರುಣ್ ಸಿಂಗ್ ಅವರು ಉಸ್ತುವಾರಿ ಆಗಿರುವುದರಿಂದ ಪಕ್ಷದ ಸಂಘಟನೆಗೆ ಬರುತ್ತಿದ್ದಾರೆ ಎಂದು ಹೇಳಿದರು. ಸಹಿ ಸಂಗ್ರಹಣೆ, ಫೋನ್ ಮಾಡಿ ಹೇಳುವ ಯಾವುದೇ ವಿದ್ಯಮಾನಗಳು ನಡೆಯುತ್ತಿಲ್ಲ. ಸಹಿ ಸಂಗ್ರಹಣೆ ಬಗ್ಗೆ ರೇಣುಕಾಚಾರ್ಯ ಅವರನ್ನೇ ಕೇಳಿ, ಸಿಎಂ ಬದಲಾವಣೆ ಎಂಬುದು ಎಲ್ಲವೂ ಊಹಾಪೋಹ ಎಂದು ಸ್ಪಷ್ಟ ಪಡಿಸಿದರು.