ಚಾಮರಾಜನಗರ: ಶಾಲೆ ಮತ್ತು ಪಿಯು ಕಾಲೇಜುಗಳಲ್ಲಿ ಹಿಜಾಬ್ ಹಾಕಲು ಅವಕಾಶವಿಲ್ಲ. ಯಾವುದೇ ಕಾರಣಕ್ಕೂ ಹಾಕಿಕೊಳ್ಳುವುದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ ಹೇಳಿದರು.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಶಾಲೆ ಮತ್ತು ಪಿಯು ಕಾಲೇಜಿನಲ್ಲಿ ಸಮವಸ್ತ್ರ ಪಾಲನೆ ಮಾಡಿ, ಪದವಿ ಕಾಲೇಜುಗಳಲ್ಲಿ ಸಮವಸ್ತ್ರದ ನೀತಿಯಿಲ್ಲ. ಅಲ್ಲಿಗೆ ಬೇಕಾದ್ರೆ ಏನಾದರೂ ಹಾಕ್ಕೊಂಡ್ ಬನ್ನಿ ಎಂದರು.
ನಾಳೆಯಿಂದ ಪದವಿ ಕಾಲೇಜುಗಳು ಆರಂಭವಾಗುತ್ತಿವೆ. ಕೋಮು ಭಾವನೆ ಹುಟ್ಟು ಹಾಕುವಂತೆ ಯಾರೇ ವ್ಯಕ್ತಿಗಳಿದ್ದರೂ ಅದನ್ನು ಮಾಡಬೇಡಿ. ಕಾನೂನನ್ನು ಗೌರವಿಸಿ ಎಂದು ಮನವಿ ಮಾಡಿದ ಅವರು, ಸಮಾಜ ಎಂದಮೇಲೆ ಎಲ್ಲವೂ ಇರಲಿದೆ. ಅದನ್ನು ಮೀರಿ ನಿಲ್ಲಬೇಕು, ದುಷ್ಟ ಶಕ್ತಿಗಳನ್ನು ಮಟ್ಟ ಹಾಕುವ ಶಕ್ತಿ ಸರ್ಕಾರಕ್ಕಿದೆ ಎಂದರು.