ಚಾಮರಾಜನಗರ: ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ನಗರದಲ್ಲಿ ತಮ್ಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಗಣಿ ಇಲಾಖೆ ಡಿಡಿಯ ಬೆವರಳಿಸಿದರು.
ರಾಯಲ್ಟಿ, ಪೆನಾಲ್ಟಿ ಸಂಗ್ರಹಿಸಿರುವಲ್ಲಿ ತೀರಾ ಕಳಪೆ ಪ್ರದರ್ಶನ ತೋರಿದ್ದಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ ನಾಗಭೂಷಣ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು ' ನಿಮ್ಮ ಕೆಲ್ಸ ಏನಪ್ಪ, ನೀವೆ ಪೆನಾಲ್ಟಿ ಹಾಕಿ , ಸುಮ್ಮನೆ ಕುಳಿತರೇ ಸರ್ಕಾರಕ್ಕೆ ಆದಾಯ ಬರುವುದು ಯಾವಾಗ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು. ಬಳಿಕ, ಸಚಿವರ ಯಾವೊಂದು ಪ್ರಶ್ನೆಗೂ ಸಮರ್ಪಕ ಅಂಕಿ-ಅಂಶವಿಲ್ಲದೇ ಪರದಾಡುತ್ತಿದ್ದನ್ನು ಗಮನಿಸಿದ ಸಚಿವ, ಮಾಹಿತಿ ಪಡೆಯದೇ ಸಭೆಗೆ ಏಕೆ ಬರುತ್ತೀರಿ, ಚಾಮರಾಜನಗರದಿಂದ ಹೊರದೇಶಕ್ಕೆ ಎಷ್ಟು ಕರಿಕಲ್ಲುಗಳು ರಫ್ತಾಗುತ್ತದೆ ಎಂಬ ಮಾಹಿತಿ ನೀವು ಪಡೆದಿದ್ದರೇ ಉದ್ಯಮಿಗಳ ಕಳ್ಳಾಟ ತಿಳಿಯುತ್ತಿತ್ತು, ಯಾವ ಮಾಹಿತಿಯೂ ಇಲ್ಲವಲ್ಲ ಎಂದು ಸಿಡಿಮಿಡಿಗೊಂಡರು.
ಮರಳು ಗಣಿಗಾರಿಕೆ ನಡೆಸಲು ನೀವೆ ಸ್ಥಳ ಗುರುತಿಸಿ, ನೀವೆ ಅದನ್ನು ರಿಜೆಕ್ಟ್ ಮಾಡಿದ್ದೀರಿ. ತಾಲೂಕು ಟಾಸ್ಕ್ ಒಪ್ಪದಿದ್ದರೇ ಮನವೊಲಿಸುವ ಕೆಲಸ ಮಾಡಬೇಕು. ಕಡಿಮೆ ಬೆಲೆಗೆ ಮರಳು ಸಿಕ್ಕರೇ ಬಡವರಿಗೆ ಅನೂಕೂಲವಾಗುವುದಿಲ್ಲವೇ ಎಲ್ಲರೊಟ್ಟಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಿ ಎಂದು ಸೂಚಿಸಿದರು.