ಚಾಮರಾಜನಗರ:ಮಾನಸಿಕ ಅಸ್ವಸ್ಧ ಯುವಕನಿಗೆ ಥಳಿಸಿ ಬೆತ್ತಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ದೇವಸ್ಥಾನದ ಪೂಜಾರಿ ಸೇರಿ ಐದು ಮಂದಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.
ಗುಂಡ್ಲುಪೇಟೆ ಸಮೀಪದ ಶನೇಶ್ವರ ದೇವಸ್ಥಾನದಲ್ಲಿ ಮಾನಸಿಕ ಅಸ್ವಸ್ಥ ಯುವಕನನ್ನು ಥಳಿಸಿ ಬೆತ್ತಲೆ ಮೆರವಣಿಗೆ ಮಾಡಿದ ಸಂಬಂಧ ಕಾಂತರಾಜು ಎಂಬುವರು ದೂರು ನೀಡಿದ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ಪೊಲೀಸರು ಐಪಿಸಿ 143,147, 95, 342, 324, 323, 355, 504 ಹಾಗೂ ಜಾತಿ ನಿಂದನೆಯಡಿ ಕೇಸು ದಾಖಲಿಸಿದ್ದಾರೆ.
ವೀರನಪುರ ಬಳಿಯ ಕಬ್ಬೇಕಟ್ಟೆ ದೇವಸ್ಥಾನದ ಪೂಜಾರಿ ಶಿವಪ್ಪ, ಬಸವರಾಜು, ಮಾಣಿಕ್ಯ, ಸತೀಶ, ಮೂರ್ತಿ ಮತ್ತು ಪುಟ್ಟಸ್ವಾಮಿ ಎಂಬುವರ ಮೇಲೆ ಪ್ರಕರಣ ದಾಖಲಾಗಿದ್ದು, ಪೂಜಾರಿ ಶಿವಪ್ಪ ಮತ್ತು ಪುಟ್ಟಸ್ವಾಮಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದವರು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಪೊಲೀಸರ ಸ್ಪಷ್ಟನೆ
ದಲಿತ ಯುವಕನ ಮೇಲೆ ಹಲ್ಲೆ ಪ್ರಕರಣ ಕುರಿತ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ. ಈ ಕುರಿತು ಪ್ರಕಟಣೆ ಬಿಡುಗೊಳಿಸಿರುವ ಪೊಲೀಸ್ ಅಧೀಕ್ಷಕರು, ಕೆಬ್ಬೆಕಟ್ಟೆ ಬಳಿಯ ಶನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಜೂ. 3ರಂದು ದೇವಸ್ಧಾನಕ್ಕೆ ನುಗ್ಗಿ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಊಹಾಪೋಹಗಳಿಗೆ ಕಿವಿಗೊಡದೆ ಪೊಲಿಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.
ದೇವಸ್ಧಾನಕ್ಕೆ ನುಗ್ಗಿ ದಾಂಧಲೆ ಮಾಡಿದ ಶ್ಯಾನಡ್ರಹಳ್ಳಿ ಎಸ್. ಪ್ರತಾಪ್ ಎಂಬುವರ ಮೇಲೆ ಹಲ್ಲೆ ಮಾಡಿದ ಸಂಬಂಧ ಗುಂಡ್ಲುಪೇಟೆ ಠಾಣೆಯಲ್ಲಿ ಕಾಂತರಾಜು ಎಂಬುವರು ನೀಡಿದ ದೂರಿನ್ವಯ ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ. ಘಟನೆ ನಡೆದ ದಿನ ಪ್ರತಾಪ್‍ನ ತಂದೆ ಶಿವಯ್ಯ ಅವರು ಠಾಣೆಗೆ ಭೇಟಿ ನೀಡಿ ನನ್ನ ಮಗ ಮಾನಸಿಕ ಅಸ್ವಸ್ಥ. ಆತನಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ನಡೆದ ಹಿಂದಿನ ದಿನ ಮನೆಯಿಂದ ಹೊರಟು ಹೋಗಿದ್ದ ಎಂದು ತಿಳಿಸಿದ್ದಾರೆ.
ಠಾಣೆಗೆ ಕರೆತಂದಿದ್ದ ಶನೇಶ್ವರ ದೇವಸ್ಧಾನ ಕಮಿಟಿಯ ಅಧ್ಯಕ್ಷ ಸ್ವಾಮಿಗೌಡ ಅವರ ಜೊತೆ ಠಾಣೆಯಲ್ಲಿ ಶಿವಯ್ಯ ಅವರು ಮಾತನಾಡಿ, ನನ್ನ ಮಗ ಮಾನಸಿಕ ಅಸ್ವಸ್ಧನಾಗಿದ್ದಾನೆ. ಯಾವುದೇ ಕೇಸು, ವಗೈರೆಯನ್ನು ಕೊಡಬೇಡಿ. ಹಾನಿಯನ್ನು ಸರಿಪಡಿಸಿಕೊಡುತ್ತೇನೆ ಎಂದು ಹೇಳಿದ್ದರು. ಅದ್ದರಿಂದ ಸ್ವಾಮಿಗೌಡ ಯಾವುದೇ ದೂರನ್ನು ನೀಡಿರುವುದಿಲ್ಲ.
ಈ ಸಂದರ್ಭದಲ್ಲಿ ಪ್ರತಾಪ್ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಮನೋರೋಗ ವಿಭಾಗದ ಮನೋರೋಗ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದ ಬಗ್ಗೆ ವೈದ್ಯರು ನೀಡಿದ ಪ್ರಮಾಣ ಪತ್ರದ ನಕಲನ್ನು ಹಾಜರು ಪಡಿಸಿ, ಪ್ರತಾಪನನ್ನು ಚಿಕಿತ್ಸೆ ಕೊಡಿಸಲು ಕರೆದುಕೊಂಡು ಹೋಗಿರುತ್ತಾರೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.