ಚಾಮರಾಜನಗರ :ಚಾಮರಾಜನಗರ ತಾಲೂಕಿನ ಬೂದಿಪಡಗ ಗ್ರಾಮದಲ್ಲಿ ನಡೆದ ಅಪರೂಪದ ಸಂಶೋಧನೆಯಲ್ಲಿ ಬೃಹತ್ ಶಿಲಾಯುಗದ ಸಮಾಧಿಗಳು ಪತ್ತೆಯಾಗಿದ್ದು, ಉತ್ಖನನ ಕಾರ್ಯ ನಡೆಯುತ್ತಿದೆ. ಇವುಗಳನ್ನು ಕ್ರಿಸ್ತಪೂರ್ವ 1,500ಕ್ಕಿಂತಲೂ ಮುಂಚಿನ ಸಮಾಧಿಗಳೆಂದು ಊಹಿಸಲಾಗುತ್ತಿದೆ.
ಬಿಳಿಗಿರಿ ರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶಕ್ಕೆ ಬೂದಿಪಡಗ ಗ್ರಾಮ ಒಳಪಟ್ಟಿದೆ. ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹಾಯಕ ಪ್ರಾಧ್ಯಾಪಕಿ ವಿ.ಶೋಭಾ ನೇತೃತ್ವದ ತಂಡವು ಉತ್ಖನನ ನಡೆಸುತ್ತಿದೆ.
ಗ್ರಾಮದಲ್ಲಿನ ಕೃಷಿ ಕ್ಷೇತ್ರದ ಭಾಗವಾಗಿರುವ ವಾಸಸ್ಥಳದಿಂದ ಸುಮಾರು 300 ಮೀಟರ್ ದೂರದಲ್ಲಿ ವಿಭಿನ್ನ ಗಾತ್ರದ ಮೂರು ಸಮಾಧಿ ನೆಲೆಗಳಿದ್ದು, ಸಂಶೋಧನಾ ತಂಡವು ಮಡಿಕೆಗಳ ಮುರಿದ ತುಣುಕುಗಳನ್ನು ವಶಪಡಿಸಿಕೊಂಡಿದೆ. ಸಮಾಧಿಗಳು ತೊಟ್ಟಿಯಂತೆ ಹಾಗೂ ವೃತ್ತದ ರೂಪದಲ್ಲಿವೆ.
ಇದರಲ್ಲಿ ಅತಿದೊಡ್ಡದು ಎಂದರೆ 9 ಮೀಟರ್ ವ್ಯಾಸ, ಅತೀ ಚಿಕ್ಕದು ಎಂದರೆ 4.5 ಮೀಟರ್ ವ್ಯಾಸದ ಸಮಾಧಿಗಳು ಇರುತ್ತವೆ. ಸಮಾಧಿಗಳ ಮೇಲಿನ ಕಸ, ಮಣ್ಣುಗಳನ್ನು ತೆರವುಗೊಳಿಸಲಾಗುತ್ತಿದೆ. ಇವುಗಳನ್ನು ಅಗೆದರೆ, ಅದರ ಕೆಳಗೆ ಏನಿದೆ ಎಂಬುದು ಬಹಿರಂಗವಾಗಲಿದೆ. ಮಣ್ಣು ಚೆನ್ನಾಗಿದ್ದರೇ ಮಾನವನ ಮೂಳೆಗಳು ಕೂಡ ಇದ್ದಿರಬಹುದು ಎನ್ನುತ್ತಾರೆ ಶೋಭಾ.
1960ರಲ್ಲಿ ಪಟ್ಟಿ ಮಾಡಿದ್ದ ಎಎಸ್ಐ : ಆರ್ಕಾಲೆಜಿಕಲ್ ಸರ್ವೇ ಆಫ್ ಇಂಡಿಯಾವು ಜಿಲ್ಲೆಯ ವಿವಿಧೆಡೆ ಸಂಶೋಧನೆ ಕೈಗೊಂಡು ಮಲೆಮಹದೇಶ್ವರ ಬೆಟ್ಟ, ಕೊಳ್ಳೇಗಾಲ, ಹನೂರು ಭಾಗದಲ್ಲಿ 40 ಸಮಾಧಿ ನೆಲೆಗಳನ್ನು ಪತ್ತೆಹಚ್ಚಿ ವರದಿ ಮಾಡಿತ್ತು.
ಆ ನೆಲೆಗಳು ಈಗಲೂ ಇವೆಯಾ ಎಂದು ಶೋಭಾ ಅವರ ತಂಡವು ಮುಂದಾಗ ಹೊಸದಾಗಿ ಬೂದಿಪಡಗದಲ್ಲಿ ಬೃಹತ್ ಶಿಲಾಯುಗದ ಸಮಾಧಿ ನೆಲೆಗಳನ್ನು ಪತ್ತೆಯಾಗಿವೆ. ಭಾರತದಲ್ಲಿನ ಶಿಲಾಯುದ ಕಾಲವು ಸಾಮಾನ್ಯವಾಗಿ ಕ್ರಿಸ್ತಪೂರ್ವ 1,500 ಅಥವಾ ಅದಕ್ಕಿಂತ ಮೊದಲಾಗಿದೆ. ಶಿಲಾಯುಗದ ಸಮಾಧಿಗಳು ಇತಿಹಾಸದ ಆರಂಭಿಕ ದಾಖಲೆಗಳಾಗಿವೆ.
ಇದನ್ನೂ ಓದಿ:ಕಾಶ್ಮೀರ ಫೈಲ್ಸ್ ಎಫೆಕ್ಟ್- ಕಾಶ್ಮೀರಿ ಪಂಡಿತರ ಮಕ್ಕಳಿಗೆ ಉಚಿತ ಶಿಕ್ಷಣದ ಆಫರ್ ನೀಡಿದ ಪುತ್ತೂರಿನ ವಿದ್ಯಾಸಂಸ್ಥೆ