ಚಾಮರಾಜನಗರ:ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಅಭಿವೃದ್ಧಿ ಕುರಿತು, ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್, ನಾಳೆ ಶ್ರೀ ಕ್ಷೇತ್ರದಲ್ಲಿ ಅಧಿಕಾರಿಗಳ ಸಭೆ ನಡೆಸಲಿದ್ದಾರೆ.
ಬೆಟ್ಟದಲ್ಲಿ ಎಸ್ಬಿಐ ಬ್ಯಾಂಕ್ನ ಎಟಿಎಂ ಮಾತ್ರವಿದ್ದು, ವಾರಕ್ಕೆ ಮೂರು ದಿನ ಕೆಟ್ಟು ನಿಂತಿರುತ್ತದೆ. ಇಲ್ಲವೇ ಹಣದ ಕೊರತೆ ಎದುರಿಸುವುದರಿಂದ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಹಣದ ಮುಗ್ಗಟ್ಟು ಎದುರಿಸುವ ಫಜೀತಿಗೊಳಗಾಗುತ್ತಿದ್ದಾರೆ.
ಆನ್ಲೈನ್ ಬ್ಯಾಂಕ್ ಮಾಡುತ್ತೇವೆ ಎಂದರೂ ಬೆಟ್ಟದಲ್ಲಿ ಬಿಎಸ್ಎನ್ಎಲ್ ಒಂದೇ ನೆಟ್ವರ್ಕ್ ಇರುವುದರಿಂದ, ಭಕ್ತರ ಸ್ಥಿತಿ ಮಾದಪ್ಪನಿಗೇ ಪ್ರೀತಿ ಎನ್ನುವಂತಾಗಿದೆ. ಕ್ಷೇತ್ರದಲ್ಲಿ ಎಸ್ಬಿಐ ಬ್ಯಾಂಕಿನ ಎಟಿಎಂ ಒಂದೇ ಇದ್ದು, ಕ್ಷೇತ್ರಕ್ಕೆ ಬರುವ ಭಕ್ತಾದಿಗಳು, ಸ್ಥಳೀಯರು ಇದನ್ನೇ ಆಶ್ರಯಿಸಿದ್ದರೂ ಅಧಿಕಾರಿಗಳು ತಲೆಕೆಡಿಸಿಕೊಳ್ಳಲ್ಲ.
ವಿದ್ಯುತ್ ಇಲ್ಲದಿದ್ದರೇ ಮೊಬೈಲ್ ನೆಟ್ವರ್ಕ್ ಕೂಡ ಸಿಗದೇ, ಎಟಿಎಂನಲ್ಲಿ ಹಣವೂ ಇಲ್ಲದೆ ಭಕ್ತಾದಿಗಳ ಸ್ಥಿತಿ ಶೋಚನಿಯವಾಗಿದೆ. ಬೆಟ್ಟದ ಅಂಗಡಿಗಳಲ್ಲಿ ಆನ್ಲೈನ್ ಬ್ಯಾಂಕಿಂಗ್ ಇದ್ದು ಕೆಲವರು ಕಾಡಿಬೇಡಿ ಹಲವರು ಪೇಟಿಎಂ, ಫೋನ್ಪೇ ಮೂಲಕ ಹಣ ಸಂದಾಯಿಸಿ ನಗದು ಪಡೆಯುವುದು ಸಾಮಾನ್ಯವಾಗಿದೆ.
2019ರಲ್ಲಿ ಬರೋಬ್ಬರಿ 36 ಲಕ್ಷ ಮಂದಿ ಭಕ್ತರು ಭೇಟಿ ನೀಡಿರುವ ಕ್ಷೇತ್ರದ ಅಭಿವೃದ್ಧಿ ಕುರಿತು, ಸಚಿವರು ನಡೆಸಲಿರುವ ಸಭೆ ತೀವ್ರ ನಿರೀಕ್ಷೆ ಹುಟ್ಟಿಸಿದೆ. ನಿತ್ಯ ಭಕ್ತಾದಿಗಳು ಎದುರಿಸುವ ಎಟಿಎಂ ಸಮಸ್ಯೆಗೆ ಸಚಿವರು ಇತಿಶ್ರೀ ಹಾಡಬೇಕಿದೆ.