ಕರ್ನಾಟಕ

karnataka

ETV Bharat / state

ಎಂಬಿಬಿಎಸ್ ಕೋರ್ಸ್: ಚಾಮರಾಜನಗರ ವೈದ್ಯಕೀಯ ಕಾಲೇಜಿಗೆ ಅನುಮತಿ ನೀಡದ ಎನ್ಎಂಸಿ

ಕೋರ್ಸ್‌ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸೀಟ್‌ ಮ್ಯಾಟ್ರಿಕ್ಸ್‌, ಕಾಲೇಜುಗಳ ವಿವರ ಹಾಗೂ ಶುಲ್ಕದ ವಿವರಗಳನ್ನು ಪ್ರಕಟಿಸಿದ್ದು, ಪಟ್ಟಿ ಮಾಡಿರುವ ಒಟ್ಟು 52 ಕಾಲೇಜುಗಳಲ್ಲಿ ಚಾಮರಾಜನಗರ ಸರ್ಕಾರಿ ವೈದ್ಯಕೀಯ ಕಾಲೇಜಿನ ಹೆಸರನ್ನು ಈ ಬಾರಿ ಕೈಬಿಡಲಾಗಿದೆ.

NMC not sanctioned by Chamarajanagar Medical College
ಚಾಮರಾಜನಗರ ವೈದ್ಯಕೀಯ ಕಾಲೇಜಿಗೆ ಅನುಮತಿ ನೀಡದ ಎನ್ಎಂಸಿ

By

Published : Nov 19, 2020, 4:51 PM IST

Updated : Nov 19, 2020, 5:19 PM IST

ಚಾಮರಾಜನಗರ:2020-21ನೇ ಸಾಲಿನ ಎಂಬಿಬಿಎಸ್‌ ಕೋರ್ಸ್‌ನ ಪ್ರವೇಶಾತಿಗಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಅನುಮತಿ ನೀಡದೆ ಪಾಲಕರು, ವಿದ್ಯಾರ್ಥಿಗಳನ್ನು ಆತಂಕಕ್ಕೆ ದೂಡಿದೆ.

ಕೋರ್ಸ್‌ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸೀಟ್‌ ಮ್ಯಾಟ್ರಿಕ್ಸ್‌, ಕಾಲೇಜುಗಳ ವಿವರ ಹಾಗೂ ಶುಲ್ಕದ ವಿವರಗಳನ್ನು ಪ್ರಕಟಿಸಿದ್ದು, ಪಟ್ಟಿ ಮಾಡಿರುವ ಒಟ್ಟು 52 ಕಾಲೇಜುಗಳಲ್ಲಿ ಚಾಮರಾಜನಗರ ಸರ್ಕಾರಿ ವೈದ್ಯಕೀಯ ಕಾಲೇಜಿನ ಹೆಸರನ್ನು ಈ ಬಾರಿ ಕೈಬಿಡಲಾಗಿದೆ.

ಇಲ್ಲಿನ ಕಾಲೇಜಿನಲ್ಲಿ 150 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಇದ್ದು, ಈ ವರ್ಷ ಕಾಲೇಜುಗಳ ಪಟ್ಟಿಯಲ್ಲಿ ಜಿಲ್ಲೆಯ ವೈದ್ಯಕೀಯ ಕಾಲೇಜಿನ ಹೆಸರು ಇಲ್ಲದೇ ಇರುವುದರಿಂದ ಪಾಲಕರು ಆತಂಕಗೊಂಡಿದ್ದಾರೆ. ಎನ್‌ಎಂಸಿ ನಿರ್ಧಾರದ ವಿರುದ್ಧ ಕಾಲೇಜಿನ ಆಡಳಿತ ಮಂಡಳಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದು, ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯುವ ವಿಶ್ವಾಸ ವ್ಯಕ್ತಪಡಿಸಿದೆ. ತಾಂತ್ರಿಕ ಕಾರಣದಿಂದ ಈ ರೀತಿ ಆಗಿದೆ. ಸಲ್ಲಿಸಿರುವ ದಾಖಲೆಗಳನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ ಪರಿಗಣಿಸಿಲ್ಲವಾದ್ದರಿಂದ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಅನುಮತಿ ಸಿಗಲಿದೆ. ಯಾರೂ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಡೀನ್ ಸಂಜೀವ ರೆಡ್ಡಿ ತಿಳಿಸಿದ್ದಾರೆ.

ಈ ವರ್ಷ ಜಿಲ್ಲೆಗೆ ಎನ್‌ಎಂಸಿ ತಂಡ ಭೇಟಿ ನೀಡಿಲ್ಲ. ಆದರೆ ಸೌಕರ್ಯಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಕೇಳಿತ್ತು. ಚಾಮರಾಜನಗರದ ವೈದ್ಯಕೀಯ ಕಾಲೇಜಿನಲ್ಲಿ ಎಲ್ಲಾ ಸೌಕರ್ಯಗಳೊಂದಿಗೆ ಈ ವರ್ಷಕ್ಕೆ 600 ಹಾಸಿಗೆ ಸಾಮರ್ಥ್ಯಗಳನ್ನು ಹೊಂದಬೇಕಿತ್ತು. ಕಾಲೇಜಿನಲ್ಲಿ ಅಷ್ಟು ಹಾಸಿಗೆಗಳು ಇಲ್ಲದೇ ಇದ್ದುದರಿಂದ ಜೆಎಸ್ಎಸ್‌ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಂಡು 600 ಹಾಸಿಗೆಗಳು ಲಭ್ಯವಿರುವ ಬಗ್ಗೆ ದಾಖಲೆಗಳನ್ನು ಸಲ್ಲಿಸಿತ್ತು. ಆದರೆ ಆಯೋಗ ಇದನ್ನು ಪರಿಗಣಿಸಿಲ್ಲ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಚಾಮರಾಜನಗರ ಸರ್ಕಾರಿ ವೈದ್ಯಕೀಯ ಕಾಲೇಜಿನ ಹೆಸರು ಪಟ್ಟಿಯಲ್ಲಿ ಇಲ್ಲದಿರುವುದನ್ನು ಕಂಡು ಪೋಷಕರು ಗಾಬರಿಗೊಂಡಿದ್ದಾರೆ.

Last Updated : Nov 19, 2020, 5:19 PM IST

ABOUT THE AUTHOR

...view details