ಚಾಮರಾಜನಗರ: ಹಿಂದಿನ ಕಾಲದಲ್ಲಿ ಪ್ಲೇಗ್, ಕಾಲರಾ ಸೇರಿದಂತೆ ಸಾಂಕ್ರಾಮಿಕ ರೋಗ, ರುಜಿನ ಬಂದಾಗ ಮಾಡುತ್ತಿದ್ದ ಮಾರಿ ಪೂಜೆಯನ್ನು ನಗರದ ಉಪ್ಪಾರ ಸಮುದಾಯದ ಜನರು ಆಚರಿಸಿ ಕೊರೊನಾ ತೊಲಗಲೆಂದು ಪ್ರಾರ್ಥಿಸಿದರು.
ಮೇಗಲ ಉಪ್ಪಾರ ಬೀದಿಯ 60ಕ್ಕೂ ಹೆಚ್ಚು ಮನೆಗಳು ಕೊರೊನಾ ವಿರುದ್ಧ ಮಾರಿ ಪೂಜೆ ಪ್ರಯೋಗಿಸುವ ಮೂಲಕ ಚೀನಾ ಭೂತ ಊರಿಗೆ ಬರದಿರಲಿ, ದೇಶದಿಂದ ತೊಲಗಲೆಂದು ಮಾರಮ್ಮ, ಮಂಟೆಲಿಂಗಯ್ಯ, ಮಹದೇಶ್ವರನಲ್ಲಿ ಬೇಡಿಕೊಂಡರು.
ಮಹಾಮಾರಿಗೆ ಧೂಪ ಹಾಕಿದ ಗಡಿ ಜಿಲ್ಲೆ ಜನರು ಮನೆ, ಬೀದಿಯನ್ನು ಸ್ವಚ್ಛಗೊಳಿಸಿ ಮನೆಮಂದಿಯೆಲ್ಲಾ ಶುಚಿಯಾಗಿ ಮನೆ ಹೆಬ್ಬಾಗಿಲಿನ ಮುಂಭಾಗ ಧೂಪ ಹಾಕುತ್ತಾ ಸಾಂಬ್ರಾಣಿಯ ಹೊಗೆ ಏಳಿಸುತ್ತಾ ಮಹಾಮಾರಿ ಕೊರೊನಾ ಭೀತಿಯಿಂದ ಆದಷ್ಟು ಬೇಗ ಜಿಲ್ಲೆ ಹಾಗೂ ದೇಶದ ಜನರು ಪಾರಾಗುವಂತೆ ಪೂಜೆ ಸಲ್ಲಿಸಿದರು.
ಈ ಕುರಿತು ಬೀದಿಯ ಮುಖಂಡರಾದ ಸೋಮಣ್ಣ ಮಾತನಾಡಿ, ನಾವು ಚಿಕ್ಕವರಾಗಿದ್ದಾಗ ಈ ರೀತಿ ಮಾರಿಗಳು ಬಂದಾಗ ಊರ ಮಂದಿಯೆಲ್ಲಾ ಸೇರಿ ಮಾರಿ ಪೂಜೆ ಮಾಡುತ್ತಿದ್ದರು. ನಾವು ಮಾರಿ ಪೂಜೆ ಮಾಡಿದ ಬಳಿಕ ರೋಗ-ರುಜಿನ ಹಬ್ಬುವುದು ನಿಲ್ಲುತ್ತಿತ್ತು. ಕೊರೊನಾದಿಂದ ಸಾವಿರಾರು ಮಂದಿ ಸತ್ತಿರುವುದರಿಂದ ನಾವೆಲ್ಲರೂ ಆತಂಕಕ್ಕೊಳಗಾಗಿದ್ದೇವೆ. ಆದ್ದರಿಂದ ಮಾರಿ ಪೂಜೆ ಮಾಡಿ ಧೂಪ ಹೊತ್ತಿಸಿ ರೋಗ ತಡೆಗಟ್ಟಿ ನಮ್ಮನ್ನು ಕಾಪಡಾಬೇಕು. ಮಕ್ಕಳು- ಹಿರಿಯರನ್ನು ಕೊರೊನಾದಿಂದ ರಕ್ಷಿಸಬೇಕೆಂದು ಬೇಡಿಕೊಂಡಿರುವುದಾಗಿ ತಿಳಿಸಿದರು.
ನಮ್ಮ ಬೀದಿಯಲ್ಲಿ ಮಂಟೇಸ್ವಾಮಿ, ಸಿದ್ದಪ್ಪಾಜಿ ಅವರ ಮೇಲೆ ನಂಬಿಕೆ. ಆದ್ದರಿಂದ ಕೊರೊನಾ ಮಾರಿಯಿಂದ ರಕ್ಷಿಸುವಂತೆ ಮನೆ ಮುಂದೆ ಧೂಪ ಹಾಕಿ, ಗಂಧದ ಕಡ್ಡಿ- ಹೂವಿನಿಂದ ಪೂಜಿಸಿದ್ದೇವೆ. ಒಳ್ಳೆಯಾದಗಲೆಂದು ಕೇಳಿಕೊಂಡಿದ್ದೇವೆ ಎಂದು ನೀಲಗಾರ ಪರಂಪರೆಯ ಪುಟ್ಟಮಾದಶೆಟ್ಟಿ ತಿಳಿಸಿದರು.
ಮಾರಿ ಪೂಜೆಯಲ್ಲಿ ಮಕ್ಕಳಾದಿಯಾಗಿ ಎಲ್ಲರೂ ಪಾಲ್ಗೊಂಡಿದ್ದರು. ಆಗಿನ ಕಾಲದಲ್ಲಿ ಮಾರಿ ಬಂತೆಂದರೆ ಈ ರೀತಿ ಪೂಜೆ ಮಾಡುತ್ತಿದ್ದರಂತೆ. ಈಗ ಕೊರೊನಾ ಎಂಬ ಮಹಾಮಾರಿ ಒಕ್ಕರಿಸಿರುವುದರಿಂದ ಅದನ್ನು ತಡೆಗೆಟ್ಟಲು ಈ ಪೂಜೆ ಮಾಡಿದ್ದು, ಮುಂದಿನ ದಿನಗಳಲ್ಲಿ ರೋಗ ಉಲ್ಬಣಿಸಬಾರದೆಂದು ಕೇಳಿಕೊಂಡಿದ್ದೇವೆ. ಎಲ್ಲರಿಗೂ ಒಳ್ಳೆಯದಾಗಲೆಂಬ ಉದ್ದೇಶದಿಂದ ಈ ಪೂಜೆ ನಡೆದಿದೆ ಎಂದು ಯುವತಿ ಸವಿತಾ ಹೇಳಿದರು.
ಪೂರ್ವಿಕರು ಆಚರಿಸಿದ್ದ ಒಂದು ಕಾಲದ ನಂಬಿಕೆಯಾದ ಮಾರಿ ಪೂಜೆ ನಗರದಲ್ಲಿ ಪ್ರಯೋಗವಾಗಿದ್ದು, ಸೋಂಕು ಕಡಿಮೆಯಾಗುವ ನಂಬಿಕೆ ಜನರಿದ್ದಾಗಿದೆ.