ಕರ್ನಾಟಕ

karnataka

ETV Bharat / state

ಚಾಮರಾಜನಗರ: ಪಿಪಿಆರ್ ವೈರಸ್ ಸೋಂಕಿಗೆ 30ಕ್ಕೂ ಹೆಚ್ಚು ಕುರಿ, ಮೇಕೆಗಳು ಸಾವು - ​ ETV Bharat Karnataka

ಪಿಪಿಆರ್ ವೈರಸ್ ಸೋಂಕಿನಿಂದ ಮೃತಪಟ್ಟ ಮೇಕೆ ಮತ್ತು ಕುರಿಗಳನ್ನು ಸರಿಯಾಗಿ ಹೂಳದೆ ಬಿಸಾಡಿರುವುದರಿಂದ ಸೋಂಕು ಉಲ್ಬಣಗೊಂಡಿದೆ ಎಂದು ಹೇಳಲಾಗುತ್ತಿದೆ.

ಪಿಪಿಆರ್ ವೈರಸ್ ಸೋಂಕು
ಪಿಪಿಆರ್ ವೈರಸ್ ಸೋಂಕು

By ETV Bharat Karnataka Team

Published : Dec 6, 2023, 6:18 PM IST

ಪಿಪಿಆರ್ ವೈರಸ್ ಸೋಂಕಿಗೆ ಕುರಿ, ಮೇಕೆಗಳು ಸಾವು

ಚಾಮರಾಜನಗರ:ಪಿಪಿಆರ್ ವೈರಸ್ ಸೋಂಕಿಗೆ ತುತ್ತಾಗಿ 30ಕ್ಕೂ ಹೆಚ್ಚು ಕುರಿ, ಮೇಕೆಗಳು ಮೃತಪಟ್ಟು ಮತ್ತಷ್ಟು ಪ್ರಾಣಿಗಳು ಸೋಂಕಿಗೆ ತುತ್ತಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ತೆರಕಣಾಂಬಿ ಸಂತೆಯಿಂದ ಖರೀದಿಸಿ ತಂದ ಮೇಕೆ ಮರಿಯಿಂದ ಈ ವೈರಸ್ ಹರಡಿದೆ ಎನ್ನಲಾಗುತ್ತಿದೆ.

ಸಾಮಾಜಿಕ ಹೋರಾಟಗಾರ ಕಾಂತರಾಜು ಪ್ರತಿಕ್ರಿಯಿಸಿ, ಕಾಯಿಲೆ ನಿಯಂತ್ರಣಕ್ಕೆ ಪಶು ಇಲಾಖೆ ತ್ವರಿತ ಕ್ರಮ ಕೈಗೊಳ್ಳಬೇಕು. ಶಿವಪುರ ವಲಯದ ಪಶು ಚಿಕಿತ್ಸಕರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕಾಯಿಲೆ ತಡೆಗೆ ಅವರ ಸಲಹೆಯಂತೆ ರೈತರೇ ಮೈಸೂರಿನಿಂದ ಲಸಿಕೆ ಖರೀದಿಸಿ ತಂದಿದ್ದಾರೆ. ಲಸಿಕೆ ನೀಡಿದ ನಂತರವೂ ರೋಗ ನಿಯಂತ್ರಣ ಸಾಧ್ಯವಾಗಿಲ್ಲ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್​ ಅವರೇ ಪಶುಸಂಗೋಪನಾ ಇಲಾಖೆ ಸಚಿವರಾಗಿದ್ದಾರೆ. ಇವರ ಜೊತೆಗೆ ಕ್ಷೇತ್ರದ ಶಾಸಕರು ಕಾಯಿಲೆ ಬಗ್ಗೆ ಮಾಹಿತಿ ಪಡೆದು ಸಚಿವರ ಗಮನಕ್ಕೆ ತಂದು ರೋಗ ತಡೆಗೆ ಕ್ರಮವಹಿಸಿ, ಮೇಕೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು. ಈ ಮೂಲಕ ರೈತ ಕುಟುಂಬಗಳು ಬೀದಿಗೆ ಬೀಳುವುದನ್ನು ತಪ್ಪಿಸಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅಧಿಕಾರಿಗಳ ಪ್ರತಿಕ್ರಿಯೆ:"ಚೌಡಹಳ್ಳಿ ಗ್ರಾಮದಲ್ಲಿ ಪಿಪಿಆರ್ ವೈರಸ್ ಸೋಂಕಿನಿಂದ ರೈತರು ಮೇಕೆಗಳನ್ನು ಕಳೆದುಕೊಂಡಿದ್ದಾರೆ. ಸಣ್ಣ ಮರಿಗಳು ಸೋಂಕಿನಿಂದ ಮೃತಪಟ್ಟಾಗ ಮರಿಗಳನ್ನು ಹೂಳದೆ ಬಿಸಾಡಿದ್ದಾರೆ. ಆದ್ದರಿಂದ ಸೋಂಕು ಉಲ್ಬಣಗೊಂಡಿದೆ. ಗ್ರಾಮದಲ್ಲಿ ಎಲ್ಲಾ ಮರಿಗಳಿಗೂ ವ್ಯಾಕ್ಸಿನೇಷನ್‌ ಮಾಡಲಾಗಿದೆ. ಇನ್ನೂ ಮರಿಗಳ ಸಾವು ನಿಯಂತ್ರಣವಾಗಿಲ್ಲ. ಸೋಂಕು ನಿಯಂತ್ರಣಕ್ಕೆ ಬರಲು 21 ದಿನಗಳು ಬೇಕು. ಮೃತಪಟ್ಟ ಎಲ್ಲಾ ಮೇಕೆಗಳಿಗೆ ಪರಿಹಾರ ನೀಡಲಾಗುತ್ತದೆ" ಎಂದು ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮೋಹನ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ:ಭ್ರೂಣ ಹತ್ಯೆ ಮಾಡಿದವರು, ಮಾಡಿಸಿಕೊಂಡವರಿಗೂ ಕಠಿಣ ಶಿಕ್ಷೆ ಆಗಲಿ: ಸಚಿವ ವೆಂಕಟೇಶ್

ABOUT THE AUTHOR

...view details