ಚಾಮರಾಜನಗರ: ಆನೆ ಕಾರಿಡಾರಿಗೆ ವ್ಯಕ್ತಿಯೋರ್ವರು ಜಮೀನು ನೀಡಲು ಮುಂದಾಗಿದ್ದು,ಜಮೀನು ಖರೀದಿಸುವುದು ಸೂಕ್ತವೆಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಬಂಡೀಪುರ ಸಿಎಫ್ಒ ಪತ್ರ ಬರೆದಿದ್ದಾರೆ.
ಮೊಯಾರ್ ಆನೆ ಹಾದಿ ಮತ್ತಷ್ಟು ಸುಗಮ: 106 ಎಕರೆ ಜಮೀನನ್ನು ಸರ್ಕಾರಕ್ಕೆ ನೀಡಲು ಮುಂದಾದ ವ್ಯಕ್ತಿ - ಬಂಡೀಪುರ ಸಿಎಫ್ಒ ಬಾಲಚಂದ್ರ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಣಿಯನಪುರ- ಮೊಯಾರ್ ಆನೆ ಮೊಗಸಾಲೆಯಲ್ಲಿ ಬರುವ 106 ಎಕರೆ ಜಮೀನನ್ನು ಪೋತರಾಜು ಎಂಬವರು ಹೊಂದಿದ್ದು, ಸೂಕ್ತ ಪರಿಹಾರ ಕೊಟ್ಟರೆ ಸರ್ಕಾರಕ್ಕೆ ಬಿಡುವುದಾಗಿ ತಿಳಿಸಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಣಿಯನಪುರ- ಮೊಯಾರ್ ಆನೆ ಮೊಗಸಾಲೆಯಲ್ಲಿ ಬರುವ 106 ಎಕರೆ ಜಮೀನನ್ನು ಪೋತರಾಜು ಎಂಬವರು ಹೊಂದಿದ್ದು ಸೂಕ್ತ ಪರಿಹಾರ ಕೊಟ್ಟರೆ ಸರ್ಕಾರಕ್ಕೆ ಬಿಡುವುದಾಗಿ ತಿಳಿಸಿದ್ದಾರೆ. ಈ ಭೂಪ್ರದೇಶ ಖರೀದಿಸಿದರೆ ಆನೆ ಹಾದಿ ಸುಗಮವಾಗಲಿದೆ. ಕಳೆದ ಬಾರಿ ಗುಂಡ್ಲುಪೇಟೆಗೆ ಅರಣ್ಯ ಸಚಿವ ಆನಂದ್ ಸಿಂಗ್ ಬಂದಿದ್ದ ವೇಳೆ ಕಾರಿಡಾರ್ ವಿಸ್ತರಿಸಲು ಚರ್ಚಿಸಲಾಗಿತ್ತು. ಜಮೀನು ಕೊಡಲು ರೈತರು ಮುಂದಾಗಬೇಕೆಂದು ಮನವಿ ಮಾಡಿಕೊಳ್ಳಲಾಗಿತ್ತು. ಅದರಂತೆ, ಪೋತರಾಜ್ ಎಂಬವರು 106 ಎಕರೆ ಜಮೀನನ್ನು ನೀಡಲು ಮುಂದಾಗಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಪತ್ರ ಬರೆದಿರುವುದಾಗಿ ಸಿಎಫ್ಒ ಬಾಲಚಂದ್ರ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.
ಒಂದು ವೇಳೆ ಆನೆ ಮೊಗಸಾಲೆ ವಿಸ್ತರಣೆಯಾದರೆ ಪ್ರಾಣಿ ಮತ್ತು ಮಾನವ ಸಂಘರ್ಷವೂ ಕಡಿಮೆಯಾಗಲಿದೆ. ಅಲ್ಲದೇ ಆನೆಗಳು ಯಾವುದೇ ಅಡೆತಡೆ ಇಲ್ಲದೇ ಸಂಚರಿಸಲು ಅನುವು ಮಾಡಿಕೊಟ್ಟಂತಾಗಲಿದೆ.