ಕೊಳ್ಳೇಗಾಲ: ನಮಗೆ ಸೇರಿದ ಜಾಗವನ್ನು ಅಕ್ರಮವಾಗಿ ಬೇರೊಬ್ಬರಿಗೆ ಖಾತೆ ಮಾಡಿಸಲಾಗಿದೆ ಎಂದು ಆರೋಪಿಸಿ ಯುವಕನೊಬ್ಬ ಅಧಿಕಾರಿಗಳ ಮುಂದೆಯೇ ವಿಷ ಸೇವಿಸಿರುವ ಘಟನೆ ಹೊಸ ಹಂಪಾಪುರದ ಗ್ರಾಮದಲ್ಲಿ ಜರುಗಿದೆ.
ಅಕ್ರಮವಾಗಿ ಖಾತೆ ಬದಲಾಯಿಸಿರುವ ಕುರಿತು ಯುವಕನ ಅಣ್ಣ ಹಾಗೂ ತಂದೆ ಮಾತನಾಡಿದ್ದಾರೆ ಹೊಸ ಹಂಪಾಪುರದ ಗ್ರಾಮದ ನಾಗಸುಂದ್ರ ಎಂಬುವವರ ಮಗ ಸಿದ್ದೇಶ್ ಎಂಬಾತನೇ ವಿಷ ಸೇವಿಸಿರುವ ವ್ಯಕ್ತಿ. ಸುಮಾರು 20 ವರ್ಷಗಳ ಹಿಂದೆ ನಾಗಸುಂದ್ರ ಎಂಬುವವರ ಸ್ವಾಧೀನದಲ್ಲಿದ್ದ ಖಾಲಿ ನಿವೇಶನವನ್ನು ಹರಳೆ ಗ್ರಾಮ ಪಂಚಾಯಿತಿಯಲ್ಲಿದ್ದ ಬಿಲ್ ಕಲೆಕ್ಟರ್ ನಂಜಪ್ಪ, ನಾಗಸುಂದ್ರನಿಂದ ಕ್ರಯ ಪತ್ರ ಪಡೆದು ಖಾತೆ ಮಾಡಿಸಿಕೊಡುತ್ತೇನೆ ಎಂದು ನಂಬಿಸಿ ಹಣ ಪಡೆದು ವಂಚಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ನಾಗಸುಂದ್ರನ ಬಳಿ ಕ್ರಯ ಪಡೆದ ನಂಜಪ್ಪ ಅಕ್ರಮವಾಗಿ ಅದೇ ಗ್ರಾಮದ ಮಹದೇವಮ್ಮ ಎಂಬುವವರಿಗೆ ಖಾತೆ ಮಾಡಿಸಿಕೊಟ್ಟಿದ್ದ ಎನ್ನಲಾಗಿದೆ. ಇಂದು ಮಹದೇವಮ್ಮ ಕಡೆಯವರು ಸೈಟ್ ಅನ್ನು ಪೊಲೀಸ್ ಸಮ್ಮುಖದಲ್ಲಿ ಅಧಿಕಾರಿಗಳಿಂದ ಅಳತೆ ಮಾಡಿಸುವಾಗ ನಾಗಸುಂದ್ರನ ಮಗ ಸಿದ್ದೇಶ್ ನಮಗೆ ಮೋಸವಾಗುತ್ತಿದೆ, ನಮ್ಮ ಸೈಟ್ ಅನ್ನು ಅಕ್ರಮವಾಗಿ ಬೇರೊಬ್ಬರ ಹೆಸರಿಗೆ ಖಾತೆ ಮಾಡಿಸಲಾಗಿದೆ.
ಖುದ್ದು ಜಿಲ್ಲಾಧಿಕಾರಿಗಳೇ ಬಂದು ನಮಗೆ ನ್ಯಾಯ ಕೊಡಿಸಲಿ ಎಂದು ಕೂಗಾಡುತ್ತ ಅಧಿಕಾರಿಗಳ ಮುಂದೆಯೇ ಜಮೀನಿಗೆ ಬಳಸುವ ಕೀಟನಾಶಕ ಸೇವಿಸಿ ಪ್ರಾಣ ಬಿಡಲು ಯತ್ನಿಸಿದ್ದಾನೆ. ನಂತರ ಸ್ಥಳದಲ್ಲಿದ್ದ ಗ್ರಾಮಸ್ಥರು ಅಸ್ವಸ್ಥನಾದ ಸಿದ್ದೇಶ್ ಎಂಬಾತನನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಅಸ್ವಸ್ಥನನ್ನು ಚಾಮರಾಜನಗರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸಿದ್ದೇಶ್ ವಿರುದ್ಧ ಪಿಡಿಒ ದೂರು: ಹೊಸ ಹಂಪಾಪುರದ ಬೋಗರಾಜು ಪತ್ನಿ ಮಹದೇವಮ್ಮರಿಗೆ ಸೇರಿದ ಖಾಲಿ ನಿವೇಶನವನ್ನು ಅಧಿಕಾರಿಗಳು ಅಳತೆ ಮಾಡುವ ವೇಳೆ ನಾಗಸುಂದ್ರ ಎಂಬುವವರ ಮಗ ಸಿದ್ದೇಶ್ ಗಲಾಟೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಅಧಿಕಾರಿಗಳ ಮುಂದೆಯೇ ವಿಷ ಸೇವಿಸಲು ಪ್ರಯತ್ನಿಸಿದ್ದಾನೆ. ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಹರಳೆ ಗ್ರಾಮ ಪಂಚಾಯಿತಿ ಪಿಡಿಒ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಓದಿ:ರಾಜಕೀಯ ಜಂಜಾಟ ಬದಿಗಿಟ್ಟು ಕುಟುಂಬ ಸಮೇತ ವಿದೇಶ ಪ್ರವಾಸಕ್ಕೆ ತೆರಳಿದ್ರಾ ಮಾಜಿ ಸಿಎಂ ಬಿಎಸ್ವೈ!?