ಚಾಮರಾಜನಗರ : ನಾಳೆಯಿಂದ(ಸೋಮವಾರ) ಮೂರನೇ ಹಂತದ ಅನ್ಲಾಕ್ ಜಾರಿಯಾಗಲಿದೆ. ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ದೇವರ ದರ್ಶನಕ್ಕೆ ಅವಕಾಶ ಇರಲಿದೆ.
ಈ ಸಂಬಂಧ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಜಯವಿಭವಸ್ವಾಮಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ದೇವರ ದರ್ಶನಕ್ಕೆ ಮಾತ್ರ ಅವಕಾಶವಿದೆ. ತೀರ್ಥಪ್ರಸಾದ, ದಾಸೋಹ, ಯಾವುದೇ ಸೇವೆ, ಉತ್ಸವ, ಮುಡಿ ಕೊಡಲು ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ನಾಳೆಯಿಂದ ಮಾದಪ್ಪನ ದರ್ಶನಕ್ಕೆ ಅವಕಾಶ ಓದಿ : ಕೋವಿಡ್ ಉಲ್ಬಣ : ತುಮಕೂರಿನ ಸಿಂಗಾಪುರ ಗ್ರಾಮ ಸಂಪೂರ್ಣ ಸೀಲ್‌ಡೌನ್
ಪ್ರಾಧಿಕಾರದ ಬಸ್ ಸೇವೆಯೂ ಸದ್ಯಕ್ಕೆ ಇರುವುದಿಲ್ಲ. ಬೇಡಿಕೆಗನುಸಾರ ಬಸ್ ಓಡಿಸುವ ಬಗ್ಗೆ ಪರಿಶೀಲಿಸಲಾಗುವುದು. ಭಕ್ತಾದಿಗಳು ಕಡ್ಡಾಯವಾಗಿ ರಂಗಮಂದಿರಕ್ಕೆ ಬಂದು ಕೋವಿಡ್ ಮಾರ್ಗಸೂಚಿಯಂತೆ ವ್ಯವಸ್ಥೆ ಮಾಡಲಾಗುವ ಆಸನಗಳಲ್ಲಿ ಕುಳಿತುಕೊಂಡು ತಮ್ಮ ಸರದಿ ಬಂದಾಗ ದರ್ಶನ ಪಡೆಯಬೇಕು.
ಯಾವುದೇ ನೂಕು ನುಗ್ಗಲಿಗೆ ಅವಕಾಶ ಇರುವುದಿಲ್ಲ. ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲನೆ ಮಾಡಲಾಗುವುದು. ಜೊತೆಗೆ ಬೆಟ್ಟದಲ್ಲಿ ವಾಸ್ತವ್ಯ ಹೂಡಲು ಅವಕಾಶವಿಲ್ಲ ಎಂದಿದ್ದಾರೆ.