ಚಾಮರಾಜನಗರ: ಗಡಿಜಿಲ್ಲೆಯಾದ ಚಾಮರಾಜನಗರ ಈಗ ಹುಲಿಗಳ ತಾಣವಾಗಿದ್ದು, ಜಿಲ್ಲೆಯ ಮೂರನೇ ಹುಲಿ ಸಂರಕ್ಷಿತ ಪ್ರದೇಶವಾಗಿ ಮಲೆಮಹದೇಶ್ವರ ವನ್ಯಜೀವಿ ಧಾಮ ಘೋಷಣೆಯಾಗುವ ಕಾಲ ಸನ್ನಿಹಿತವಾಗಿದೆ.
ಮಲೆಮಹದೇಶ್ವರ ವನ್ಯಜೀವಿ ಧಾಮದ ಡಿಎಫ್ಒ ಏಡುಕುಂಡಲು, ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲು ಎನ್ಟಿಸಿಎ ಅನುಮೋದನೆ ಉಲ್ಲೇಖಿಸಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇನ್ನೊಂದು ವಾರದಲ್ಲಿ ಸರ್ಕಾರದಿಂದ ಅಧಿಸೂಚನೆ ಪ್ರಕಟಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
1,224 ಚದರ ಕಿ.ಮೀ ಪ್ರಾದೇಶಿಕ ಅರಣ್ಯದ ಪೈಕಿ 906.18 ಚದರ ಕಿ.ಮೀ ಪ್ರದೇಶವನ್ನು 2013ರಲ್ಲಿ ಮಲೆಮಹದೇಶ್ವರ ವನ್ಯಧಾಮ ಎಂದು ಘೋಷಿಸಲಾಗಿತ್ತು. ವರ್ಷದಿಂದ ವರ್ಷಕ್ಕೆ ಅರಣ್ಯದಲ್ಲಿ ವ್ಯಾಘ್ರಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಅರಣ್ಯ ಇಲಾಖೆಯು 2018ರಲ್ಲಿ ಈ ವನ್ಯಧಾಮವನ್ನೂ ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಲು ಪ್ರಯತ್ನ ಆರಂಭಿಸಿತ್ತು. ಸರ್ಕಾರಕ್ಕೆ ಈ ಸಂಬಂಧ ಪ್ರಸ್ತಾವನೆಯನ್ನೂ ಸಲ್ಲಿಸಿತ್ತು.