ಚಾಮರಾಜನಗರ: ಈ ವರ್ಷದ ಕೊನೆಯ ಚಂದ್ರಗ್ರಹಣ ಇಂದು ನಡೆಯಲಿದೆ. ಭಾರತದಲ್ಲಿ ಮಧ್ಯರಾತ್ರಿ ಭಾಗಶಃ ಚಂದ್ರಗ್ರಹಣ ಗೋಚರಿಸಲಿದೆ. ಚಂದ್ರಗ್ರಹಣ ಮಧ್ಯರಾತ್ರಿ 1:5 ಗಂಟೆಗೆ ಶುರುವಾಗಿ, 2:24ಕ್ಕೆ ಮುಕ್ತಾಯಗೊಳ್ಳಲಿದೆ. ಗ್ರಹಣದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ದೇವಾಲಯಗಳಲ್ಲಿ ಪೂಜೆಯ ಸಮಯ ಬದಲಾಗಿದ್ದು, ಕೆಲವು ದೇವಾಲಯಗಳನ್ನು ಬೇಗನೆ ಬಂದ್ ಮಾಡಿದರೆ, ಮತ್ತೆ ಕೆಲವೆಡೆ ಗ್ರಹಣ ಕಾಲದಲ್ಲಿ ಭಕ್ತರಿಗೆ ವಿಶೇಷಪೂಜೆ, ಪುನಸ್ಕಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮತ್ತೊಂದೆಡೆ, ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ದರ್ಶನದಲ್ಲಿ ಯಾವುದೇ ವ್ಯತ್ಯಾಸ ಇಲ್ಲವಾಗಿದ್ದು, ಭಕ್ತರು ಎಂದಿನಂತೆ ಮಾದಪ್ಪನ ದರ್ಶನವನ್ನು ಪಡೆಯಬಹುದಾಗಿದೆ. ಭಕ್ತರಿಗೆ ಬೆಳಗ್ಗೆಯಿಂದ ರಾತ್ರಿಯವರೆಗೂ ದೇವಸ್ಥಾನ ತೆರೆದಿರಲಿದೆ. ಮಧ್ಯ ರಾತ್ರಿ ಚಂದ್ರ ಗ್ರಹಣದ ಬಳಿಕ ದೇವಸ್ಥಾನ ಅರ್ಚಕರು ದೇಗುಲವನ್ನು ಸಂಪೂರ್ಣ ಶುಚಿಗೊಳಿಸಲಿದ್ದಾರೆ ಎಂದು ದೇಗುಲದ ಆಗಮಿಕ ಕರವೀರಸ್ವಾಮಿ ತಿಳಿಸಿದ್ದಾರೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನದ ಸಮಯದಲ್ಲಿ ಬದಲಾವಣೆ:ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಳದ ಪ್ರಧಾನ ಅರ್ಚಕರ ನಿರ್ದೇಶನದಂತೆ ಇಂದು ಭಕ್ತಾದಿಗಳಿಗೆ ಶ್ರೀ ದೇವರ ದರ್ಶನದ ಸಮಯದಲ್ಲಿ ಬದಲಾವಣೆಯಾಗಲಿದ್ದು, ಶ್ರೀ ದೇವರ ದರ್ಶನ ಹಾಗೂ ಸೇವಾ ಸಮಯವನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ. ಇಂದು ರಾತ್ರಿ ಮಹಾಪೂಜೆಯು ಸಾಯಂಕಾಲ ಗಂಟೆ 6.30ಕ್ಕೆ ಮುಕ್ತಾಯವಾಗಲಿದೆ. ಸಾಯಂಕಾಲ ಆಶ್ಲೇಷ ಬಲಿ ಸೇವೆಯು ಇರುವುದಿಲ್ಲ. ಈ ದಿನ ಸಾಯಂಕಾಲ ಗಂಟೆ 6.30ರ ನಂತರ ಶ್ರೀ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಮಾತ್ರವಲ್ಲದೇ ರಾತ್ರಿ ಪ್ರಸಾದ ಭೋಜನ ವ್ಯವಸ್ಥೆ ಇರುವುದಿಲ್ಲ ಎಂದು ದೇವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.