ಚಾಮರಾಜನಗರ :ಕರ್ನಾಟಕದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಲಯ ಅಮಾವಾಸ್ಯೆ ಜಾತ್ರೆ ಸಡಗರದಿಂದ ನಡೆಯುತ್ತಿದ್ದು, ಭಕ್ತಸಾಗರವೇ ಹರಿದು ಬರುತ್ತಿದೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ಅಕ್ಟೋಬರ್ 11 ರಿಂದ 15ರ ವರೆಗೆ ಮಹಾಲಯ ಅಮಾವಾಸ್ಯೆ ಜಾತ್ರೆ ನಡೆಯುತ್ತಿದೆ. ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಸುಮಾರು 1.5 ರಿಂದ 2 ಲಕ್ಷಕ್ಕೂ ಅಧಿಕ ಭಕ್ತಾಧಿಗಳು ಆಗಮಿಸಿದ್ದಾರೆ. ಹೀಗಾಗಿ ವಾಹನ ದಟ್ಟಣೆ, ಹೆಚ್ಚಾಗಿ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ದ್ವಿಚಕ್ರ ವಾಹನ ಪ್ರವೇಶ ನಿರ್ಬಂಧಿಸಲಾಗಿದೆ. ಹಾಗೆಯೇ, ಅಮಾವಾಸ್ಯೆ ಪ್ರಯುಕ್ತ ಭಕ್ತರಿಗೆ ಕುಡಿಯುವ ನೀರು, ವಿಶೇಷ ದಾಸೋಹ, ನೆರಳಿನ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಭಕ್ತರ ಸಮಸ್ಯೆ ಆಲಿಸಲು ಸರತಿ ಸಾಲಿನಲ್ಲಿ ನಿಂತ ಕಾರ್ಯದರ್ಶಿ : ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಇರುವ ಮುಖ್ಯ ಸಮಸ್ಯೆಗಳ ಬಗ್ಗೆ ಭಕ್ತರಿಂದಲೇ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಅವರು ಸರತಿ ಸಾಲಿನಲ್ಲಿ ತೆರಳಿ ಮಾಹಿತಿ ಪಡೆದುಕೊಂಡರು.
ಕಾರ್ಯದರ್ಶಿಯಾಗಿ ಸರಸ್ವತಿ ಅವರು ಅಧಿಕಾರ ವಹಿಸಿಕೊಂಡು ಕೇವಲ ಎರಡು ತಿಂಗಳಷ್ಟೇ ಆಗಿದೆ. ಇದು ಅವರಿಗೆ ಮೊದಲನೇ ಜಾತ್ರೆಯಾಗಿದ್ದು, ಸಮಸ್ಯೆಗಳ ಬಗ್ಗೆ ಭಕ್ತರಿಂದಲೇ ಮಾಹಿತಿ ಪಡೆದುಕೊಂಡು ಮುಂದಿನ ಜಾತ್ರಾ ಮಹೋತ್ಸವಕ್ಕೆ ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಭರವಸೆ ವ್ಯಕ್ತಪಡಿಸಿದರು. ಜೊತೆಗೆ, ಪ್ರಾಧಿಕಾರದ ವತಿಯಿಂದಲೇ ಭಕ್ತರಿಗೆ ಕಡಿಮೆ ದುಡ್ಡಿನಲ್ಲಿ ರೂಂ ವಿತರಿಸುತ್ತಿದ್ದೇವೆ, ಭಕ್ತಾದಿಗಳು ಖಾಸಗಿ ವಸತಿಗೃಹಗಳನ್ನು ಆಶ್ರಯಿಸದೇ ಪ್ರಾಧಿಕಾರದ ವಸತಿಗೃಹಗಳನ್ನು ಪಡೆಯಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ :ಕೋಟಿ ಒಡೆಯ ಮಾದಪ್ಪ: 36 ದಿನಕ್ಕೆ ಹುಂಡಿಯಲ್ಲಿ 2.38 ಕೋಟಿ ರೂ. ಸಂಗ್ರಹ