ಚಾಮರಾಜನಗರ: ಕೋವಿಡ್-19 ಭೀತಿಯಿಂದಾಗಿ ಮೂರು ದಿನ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಹಾಗೂ 23 ದಿನಗಳ ಕಾಲ ಕೊಳ್ಳೇಗಾಲದ ಶಿವನಸಮುದ್ರದ ದರ್ಗಾಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಿ ಇಲ್ಲಿನ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಆದೇಶ ಹೊರಡಿಸಿದ್ದಾರೆ.
ಕೋವಿಡ್ ಭೀತಿ: 3 ದಿನ ಮಾದಪ್ಪನ ಬೆಟ್ಟ, 23 ದಿನ ಶಿವನಸಮುದ್ರ ದರ್ಗಾ ಬಂದ್..! - ಪ್ರಾರ್ಥನೆಗೆ ನಿರ್ಬಂಧ
ಸಾಮಾಜಿಕ ಅಂತರ ಕಾಪಾಡುವುದು ಕಷ್ಟ ಎಂದು ಅಂದಾಜಿಸಿರುವ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಹಾಗೂ ಶಿವನಸಮುದ್ರದ ದರ್ಗಾಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಿ ಆದೇಶ ಪ್ರಕಟಿಸಿದ್ದಾರೆ.
ಇದೇ 19 ರಂದು ಮಹದೇಶ್ವರನಿಗೆ ಎಣ್ಣೆ ಮಜ್ಜನ ಸೇವೆ, 20ರಿಂದ ಅಮಾವಾಸ್ಯೆಯ ವಿಶೇಷ ಪೂಜೆಗಳು ನಡೆಯುವುದರಿಂದ ಭಕ್ತರ ಸಂಖ್ಯೆಯಲ್ಲಿ ನಾಲ್ಕೈದು ಪಟ್ಟು ಹೆಚ್ಚಾಗಲಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ. ಹತ್ತಾರು ಸಾವಿರ ಮಂದಿ ಭಕ್ತಾದಿಗಳನ್ನು ಸಾಮಾಜಿಕ ಅಂತರ ಕಾಪಾಡಿಕೊಂಡು ನಿರ್ವಹಿಸುವುದು ಕಷ್ಟವಾದ್ದರಿಂದ 19 ರಿಂದ 21 ರವರೆಗೆ ಮೂರು ದಿನಗಳ ಕಾಲ ಭಕ್ತರ ಪ್ರವೇಶಕ್ಕೆ ಡಿಸಿ ನಿರ್ಬಂಧ ಹೇರಿದ್ದಾರೆ.
ಇನ್ನು, ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಹಜರತ್ ದರ್ಗಾಕ್ಕೆ ಬೆಂಗಳೂರು ಹಾಗೂ ಇನ್ನಿತರ ಕಂಟೈನ್ಮೆಂಟ್ ವಲಯಗಳಿಂದಲೂ ಭಕ್ತರು ಆಗಮಿಸಿ ಅಲ್ಲೇ ತಂಗಿ ವಿಶೇಷ ಪೂಜೆ ಸಲ್ಲಿ ಸುತ್ತಾರೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಜೂ. 30 ರವರೆಗೂ ದರ್ಗಾ ಪ್ರವೇಶ ಮತ್ತು ಪ್ರಾರ್ಥನೆಗೆ ನಿರ್ಬಂಧ ವಿಧಿಸಲಾಗಿದೆ.