ಗುಂಡ್ಲುಪೇಟೆ (ಚಾಮರಾಜನಗರ): ರಾಸಾಯನಿಕ ಗೊಬ್ಬರ ತುಂಬಿಕೊಂಡು ತಮಿಳುನಾಡಿನ ಕಡೆಯಿಂದ ಬರುತ್ತಿದ್ದ ಲಾರಿ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರದೇಶದ ಮೇಲುಕಾಮನಹಳ್ಳಿ ಚೆಕ್ ಪೋಸ್ಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ.
ಬಂಡೀಪುರ ದಾಟಿ ಬರುವಾಗ ಚೆಕ್ ಪೋಸ್ಟ್ ಬಳಿ ಇರುವ ಇಳಿಜಾರಿನಲ್ಲಿ ಲಾರಿ ನಿಯಂತ್ರಣಕ್ಕೆ ಸಿಗದೆ ಮಗುಚಿ ಬಿದ್ದಿದೆ. ಬಿದ್ದಿರುವ ರಭಸಕ್ಕೆ ಚಾಲಕನ ಕಾಲು ಮುರಿದಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಗೊಬ್ಬರದ ಮೂಟೆಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ. ವಿಷಯ ತಿಳಿದ ಸ್ಥಳೀಯರು ಗೊಬ್ಬರ ತುಂಬಿಕೊಳ್ಳಲು ಬಂದಿದ್ದರು. ಆದರೆ ಅರಣ್ಯ ಇಲಾಖೆಯ ಸಿಬ್ಬಂದಿ ಅವಕಾಶ ನೀಡಲಿಲ್ಲ.
ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್ ಮತ್ತು ಜ್ಞಾನೇಶ್ ಭೇಟಿ ನೀಡಿ ಲಾರಿಯಲ್ಲಿದ್ದ ಗೊಬ್ಬರವನ್ನು ಅರಣ್ಯ ಇಲಾಖೆಯ ಕಚೇರಿ ಬಳಿ ಸ್ಥಳಾಂತರ ಮಾಡಿ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ.
ಮಣ್ಣುಪಾಲಾಗಿರುವ ಗೊಬ್ಬರವನ್ನು ಅಲ್ಲೇ ಬಿಟ್ಟರೆ ಕಾಡು ಪ್ರಾಣಿಗಳಿಗೆ ತೊಂದರೆ ಆಗುತ್ತದೆ ಎಂದು ರಾಸಾಯನಿಕ ಗೊಬ್ಬರವನ್ನು ಮಣ್ಣಿನ ಸಮೇತ ತುಂಬಿಸಿ ಕಾಡಿನಿಂದ ಹೊರ ಹಾಕಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಜೆಸಿಬಿ ಬಳಸಿಕೊಂಡು ಗೊಬ್ಬರ ತೆಗೆಸಲಾಗುತ್ತದೆ ಎಂದು ಸಿಬ್ಬಂದಿ ಮಾಹಿತಿ ನೀಡಿದ್ದಾರೆ.