ಕರ್ನಾಟಕ

karnataka

ETV Bharat / state

ಬಾವಿಗೆ ಬೀಗ, ಅದಕ್ಕೋರ್ವ ಕಾವಲುಗಾರ: ಕಾಡಿನ ಮಕ್ಕಳಿಗೆ ದಿನಕ್ಕೆ ನಾಲ್ಕೇ ಬಿಂದಿಗೆ ನೀರು! - ನೀರು

ಇಲ್ಲಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಮೆದಗಣಾನೆ ಗ್ರಾಮದ ಗಿರಿಜನರಿಗೆ ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದ್ದು, ದಿನಕ್ಕೆ ಕೇವಲ ನಾಲ್ಕೇ ಬಿಂದಿಗೆ ನೀರು ಪಡೆಯುತ್ತಿದ್ದಾರೆ.

ಬಾವಿಗೆ ಬೀಗ

By

Published : Mar 23, 2019, 11:28 AM IST

ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಮೆದಗಣಾನೆ ಗ್ರಾಮದಲ್ಲಿ ವಾಸಿಸುತ್ತಿರುವ ಗಿರಿಜನರು ಕಳೆದೊಂದು ತಿಂಗಳಿನಿಂದ ಕುಡಿಯುವ ನೀರಿಗೆ ಪಡಿಪಾಟಲು ಅನುಭವಿಸುತ್ತಿದ್ದಾರೆ.

ಗ್ರಾಮದ ಕೆರೆ ಬತ್ತಿ ಹೋಗಿದ್ದು ಕುಡಿಯಲು, ದಿನ ಬಳಕೆಗೆ ಪೋಡಿನ 50 ಕುಟುಂಬ ಒಂದೇ ಬಾವಿಯನ್ನು ಅವಲಂಬಿಸಿದ್ದಾರೆ. ಈಗ ಬಾವಿಯ ನೀರು ಖಾಲಿಯಾಗುತ್ತಿರುವುದರಿಂದ ಮಿತವಾಗಿ ನೀರು ಬಳಸಲು ಬಾವಿಗೆ ಬೀಗ ಹಾಕಿ, ಅದಕ್ಕೋರ್ವ ಕಾವಲುಗಾರನನ್ನು ನೇಮಿಸಲಾಗಿದೆ. ಗ್ರಾಮಸ್ಥರೆಲ್ಲರೂ ಸೇರಿ ಒಂದು ಕುಟುಂಬಕ್ಕೆ ದಿನಕ್ಕೆ 4 ಬಿಂದಿಗೆ ನೀರನ್ನು ನಿಗದಿಪಡಿಸಿದ್ದಾರೆ.

ಈಗ 4 ಬಿಂದಿಗೆ ನೀರು ಪಡೆಯುತ್ತಿದ್ದೇವೆ. ಇನ್ನು ಐದಾರು ದಿನ ಕಳೆದರೆ 2 ಬಿಂದಿಗೆ ನೀರು ಪಡೆಯಬೇಕಾಗುತ್ತದೆ. ಬಳಿಕ ಅದೂ ಇರುವುದಿಲ್ಲ ಎಂದು ಪೋಡಿನ ಮಹಿಳೆಯರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಬಾವಿಗೆ ಬೀಗ

ತಿಂಗಳಿಗೊಮ್ಮೆ ಸ್ನಾನ, ಮಧ್ಯಾಹ್ನವೇ ತಿಂಡಿ:

4 ಬಿಂದಿಗೆಗಿಂತ ಹೆಚ್ಚು ನೀರು ಬೇಕೆಂದರೆ ಆರೇಳು ಕಿ.ಮೀ. ದೂರ ನಡೆಯಬೇಕು. ಆನೆ, ಕರಡಿ ದಾಳಿ ಭಯ ತೊರೆದು ನೀರಿಗಾಗಿ ನಡೆಯಬೇಕಿದ್ದು, ಹಳ್ಳದಿಂದ ನೀರು ತರುವ ಹೊತ್ತಿಗೆ ಮಧ್ಯಾಹ್ನ ಆಗುವುದರಿಂದ ಮಧ್ಯಾಹ್ನಕ್ಕೇ ಎಲ್ಲರೂ ಉಪಾಹಾರ ಸೇವಿಸುವ ಪರಿಸ್ಥಿತಿ ಇದೆ.

4 ಬಿಂದಿಗೆ ನೀರಲ್ಲಿ ಅಡುಗೆಯನ್ನೂ ಮಾಡಬೇಕು, ಕುಡಿಯಲು ಬಳಸಬೇಕು. 15 ದಿನಕ್ಕೊಮ್ಮೆ, ತಿಂಗಳಿಗೊಮ್ಮೆ ಸ್ನಾನ ಮಾಡುತ್ತಿದ್ದೇವೆ. ಬೆಟ್ಟಕ್ಕೆ ಬರುವ ಭಕ್ತಾದಿಗಳು ಸ್ನಾನ ಮಾಡಿ ಅನೈರ್ಮಲ್ಯಗೊಂಡಿರುವ ಅಂತರಗಂಗೆಯ ನೀರಲ್ಲಿ ಸ್ನಾನ ಮಾಡುತ್ತಿದ್ದೇವೆ. ನೀರು ತರಲು ಹೋದರೆ ಪ್ರಾಣಿ ಭಯ. ಅನೈರ್ಮಲ್ಯ ನೀರಿನಲ್ಲಿ ಸ್ನಾನ ಮಾಡಿದರೆ ರೋಗ ಭಯ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆಧುನಿಕ ಯುಗದಲ್ಲೂ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿರುವ ಈ ಗಿರಿಜನರತ್ತ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಿ ಕುಡಿಯುವ ನೀರನ್ನು ಕಲ್ಪಿಸಬೇಕಿದೆ ಎಂಬುದು ಇವರ ಆಗ್ರಹ.

ABOUT THE AUTHOR

...view details