ಚಾಮರಾಜನಗರ :ಕೊರೊನಾ ಬಗ್ಗೆ ಗಂಭೀರತೆ ಅರಿತು ಜನರು ಸಹಕಾರ ಕೊಟ್ಟರೆ ಓಕೆ, ಇಲ್ಲದಿದ್ದರೇ ಒಂದಷ್ಟು ನಿರ್ಬಂಧ ಹೇರುವುದು ಅನಿವಾರ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಹನೂರು ತಾಲೂಕಿನ ಸೇಬಿನಕೋಬೆ ಹಾಡಿಗೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಲಾಕ್ಡೌನ್ ಮುಂದುವರಿಸಬೇಕೋ, ಬೇಡವೋ ಎಂಬ ಎರಡು ಅಭಿಪ್ರಾಯಗಳು ವ್ಯಕ್ತವಾಗಿದೆ.
ಜನರು ಸಹಕಾರ ಕೊಟ್ಟರೆ ಹಂತ ಹಂತವಾಗಿ ಅನ್ಲಾಕ್ ಜಾರಿಯಾಗಲಿದೆ ಎಂದು ಸಿಎಂ ಹೇಳಿದ್ದಾರೆ. ಜನರಿಗೆ ತೊಂದರೆಯಾಗದಂತೆ ಒಂದಷ್ಟು ಸೇವೆಗಳ ಮೇಲೆ ನಿರ್ಬಂಧ ಕಡಿತಗೊಳಿಸಲು ಚರ್ಚಿಸಿದ್ದು, ಸಿಎಂ ಬಳಿ ನನ್ನ ಅಭಿಪ್ರಾಯ ಹೇಳುತ್ತೇನೆ ಎಂದರು.
ಸಚಿವ ಸುರೇಶ್ ಕುಮಾರ್ ಮಾತನಾಡಿದರು ಡೆತ್ರೇಟ್ ರಾಜ್ಯದಲ್ಲಿ ಶೇ.1ಕ್ಕೆ ಇಳಿಯಬೇಕು ಮತ್ತು ಪಾಸಿಟಿವಿಟಿ ಪ್ರಮಾಣ 5ಕ್ಕೆ ಇಳಿಯಬೇಕು. ಆ ನಿಟ್ಟಿನಲ್ಲಿ ಚಿಂತನೆ ನಡೆದಿದ್ದು, ಜನರು ಸಹಕಾರ ಕೊಟ್ಟರೆ ಓಕೆ, ಇಲ್ಲದಿದ್ದರೆ ನಿರ್ಬಂಧ ಮುಂದುವರಿಸುವುದು ಅನಿವಾರ್ಯ ಎಂದು ಹೇಳಿದರು.
ಹಾಡಿನ ಜನರು ಆಹಾರ ಇಲ್ಲದೇ ಪರಿತಪಿಸುತ್ತಿದ್ದಾರೆಂಬ ಟ್ವೀಟ್‌ಗೆ ಸಂಬಂಧಿಸಿದಂತೆ ಮಾತನಾಡಿ, ಸಾಮಾಜಿಕ ಜಾಲ ತಾಣಗಳಲ್ಲಿ ತಪ್ಪು ಹಾಗೂ ಸುಳ್ಳು ಸುದ್ದಿ ಹಾಕಬೇಡಿ, ಇದರಿಂದ ಸಮಾಜಕ್ಕೆ ಕೆಟ್ಟ ಸಂದೇಶ ಹೋಗಲಿದೆ ಹಾಗೂ ಜಿಲ್ಲೆ ಮತ್ತು ರಾಜ್ಯದ ಬಗ್ಗೆ ಕೆಟ್ಟ ಭಾವನೆ ಬರಲಿದೆ ಎಂದು ಮನವಿ ಮಾಡಿದರು.
ಸೇಬಿನಕೋಬೆ ಹಾಡಿಯ ಜನರಿಗೆ ಸರ್ಕಾರದಿಂದ ಆಹಾರ ಪದಾರ್ಥವಾಗಲಿ ಅಥವಾ ಯಾವುದೇ ಸೌಲಭ್ಯವನ್ನಾಗಲಿ ನೀಡಿಲ್ಲ. ಇದರಿಂದ ಹಾಡಿಯ ಜನರು ಸಂಕಷ್ಟದಲ್ಲಿದ್ದಾರೆ ಎಂದು ಸ್ವಯಂ ಸೇವಾ ಸಂಸ್ಥೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿಬಿಟ್ಟಿತ್ತು. ಆದರೆ, ಇದು ಸತ್ಯಕ್ಕೆ ದೂರವಾದ ವಿಷಯವಾಗಿದೆ.
ಹಾಡಿಯಲ್ಲಿ ಅಂತ್ಯೋದಯ ಚೀಟಿ ಹೊಂದಿರುವ ಜನರಿಗೆ ಎಲ್ಲ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಲಾಗಿದೆ ಮತ್ತು ಗಿರಿಜನ ಕಲ್ಯಾಣ ಅಭಿವೃದ್ಧಿ ಇಲಾಖೆ ವತಿಯಿಂದ ನೀಡಲಾಗುವ ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥಗಳಾದ ತುಪ್ಪ, ಮೊಟ್ಟೆ, ವಿವಿಧ ಬಗೆಯ ಕಾಳುಗಳು, ಬೆಲ್ಲ ಹಾಗೂ ಸಕ್ಕರೆಯನ್ನು ಸರಬರಾಜು ಮಾಡಲಾಗಿದೆ ಎಂದರು.
ಸ್ವಯಂ ಸೇವಾ ಸಂಸ್ಥೆಯವರು ಮಾತನಾಡಿಸಿರುವ ಸೇಬಿನಕೋಬೆ ಹಾಡಿಯ ಮಾದಮ್ಮ ಅವರನ್ನು ಮಾತನಾಡಿಸಿದ್ದೇವೆ ಹಾಗೂ ಹಾಡಿಯ ಜನರನ್ನು ಮಾತನಾಡಿಸಿದ್ದೇವೆ. ಎಲ್ಲರೂ ನಮಗೆ ಆಹಾರ ಪದಾರ್ಥಗಳು ಸರಬರಾಜಾಗುತ್ತಿದೆ ಎಂದು ಹೇಳಿದ್ದಾರೆ. ಹೀಗಾಗಿ, ಯಾರೇ ಆಗಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಅಥವಾ ತಪ್ಪು ಸುದ್ದಿ ಹಾಕಬೇಡಿ. ಇದರಿಂದ ಸಮಾಜಕ್ಕೆ ಕೆಟ್ಟ ಸಂದೇಶ ಹೋಗಲಿದೆ ಎಂದರು.
ಓದಿ:ಆ್ಯಂಬುಲೆನ್ಸ್ ಟೆಂಡರ್ ರದ್ದು : ಸರ್ಕಾರದ ಧೋರಣೆಗೆ ಹೈಕೋರ್ಟ್ ಅಸಮಾಧಾನ