ಚಾಮರಾಜನಗರ: ನಗರದಲ್ಲಿ ಇಬ್ಬರನ್ನು ಬಲಿ ಪಡೆದ ಹುಲಿಯೇನೋ ಸೆರೆಯಾಯ್ತು. ಆದರೆ, ಇದಕ್ಕೆ ಕಾರಣ ಮಾಳಿಗಮ್ಮನಂತೆ.
ನರಭಕ್ಷಕ ವ್ಯಾಘ್ರನ ಸೆರೆಗೆ ಸಪ್ತದೇವತೆಗಳಲ್ಲಿ ಒಂದಾದ ಮಾಳಿಗಮ್ಮ ಕಾರಣ ಎಂಬುದು ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮಸ್ಥರ ನಂಬಿಕೆ. ಸಣ್ಣ ಮನಸ್ತಾಪದಿಂದ ಕಳೆದ 4 ವರ್ಷಗಳಿಂದ ಮಾಳಿಗಮ್ಮ ದೇವರ ಜಾತ್ರೆ ಮಾಡದಿದ್ದಕ್ಕೆ ಹುಲಿ ದಾಳಿಗಳಾಗುತ್ತಿವೆ ಎಂದು ಗ್ರಾಮಸ್ಥರು ನಂಬಿದ್ದಾರೆ.
ಇಬ್ಬರನ್ನು ಕೊಂದ ಹುಲಿ ದಾಳಿಗೆ ಮಾಳಿಗಮ್ಮ ಕಾರಣವಂತೆ.. ಗುಂಡ್ಲುಪೇಟೆ ತಾಲೂಕಿನ ಹಸಗೂಲಿ ಮಾರಮ್ಮ, ಹುಲಿಯಮ್ಮ, ಕಾಳಮ್ಮ, ಗುರುಜಮ್ಮ, ಮಂಗಳದ ಮಾರಮ್ಮ, ಕೆಬ್ಬೇಪುರದ ಮಾರಮ್ಮ ಮತ್ತು ಮಾಳಿಗಮ್ಮ ಸಹೋದರಿಯರಾಗಿದ್ದು, ಮಾಳಿಗಮ್ಮನ ಜಾತ್ರೆ ಬಿಟ್ಟು ಉಳಿದೆಲ್ಲಾ ಜಾತ್ರೆಗಳನ್ನು ಮಾಡಲಾಗುತ್ತಿತ್ತು. ಈ ಕಾರಣಕ್ಕಾಗಿ ಮುನಿಸಿಕೊಂಡ ಮಾಳಿಗಮ್ಮ ಈ ರೀತಿ ಹುಲಿ ದಾಳಿಗೆ ಕಾರಣವಾಗಿದ್ದಾಳೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಸಿಎಫ್ಒ ಭಾಗಿ:
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಿಎಫ್ಒ ಬಾಲಚಂದ್ರ, ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ಮಾತನಾಡಿ, ನಾನು ಕೂಡ ಅವರ ಪೂಜೆಯಲ್ಲಿ ಓರ್ವ ಗ್ರಾಮಸ್ಥನಾಗಿ ಭಾಗಿಯಾಗುತ್ತೇನೆ, ಅವರ ನಂಬಿಕೆ ಗೌರವಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.