ಚಾಮರಾಜನಗರ: ಲಾಕ್ಡೌನ್ ಎಫೆಕ್ಟ್ ನಿಂದ ಕಂಗೆಟ್ಟಿದ್ದ ಗಡಿ ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆಗಳು ಸೋಮವಾರದಿಂದ ಚೇತರಿಕೆ ಕಂಡಿದ್ದು, ಬಹುತೇಕ ಎಲ್ಲಾ ಮಳಿಗೆಗಳ ಮುಂದೆ ಜನರು ಕಿಕ್ಕಿರಿದು ಸೇರಿದ್ದರು. ಮುಖ್ಯವಾಗಿ, ಮದ್ಯದಂಗಡಿಗಳಲ್ಲಂತೂ ಸುಡು ಬಿಸಿಲನ್ನು ಲೆಕ್ಕಿಸದೇ ಗುಂಡುಪ್ರಿಯರು ಎಣ್ಣೆಗಾಗಿ ಹಾತೊರೆದರು.
ಲಾಕ್ಡೌನ್ ನಿಂದಾಗಿ ಕಳೆದ 45 ದಿನಗಳಲ್ಲಿ ಕೆಎಸ್ಆರ್ಟಿಸಿಯ ಚಾಮರಾಜನಗರ ವಿಭಾಗವು ಬರೋಬ್ಬರಿ 60 ಕೋಟಿ ರೂ. ಆದಾಯ ಖೋತಾ ಆಗಿದೆ. ಪ್ರಾಯೋಗಿಕವಾಗಿ ಚಾಮರಾಜನಗರ ಜಿಲ್ಲಾದ್ಯಂತ 15 ಬಸ್ಸುಗಳು ಸೋಮವಾರದಿಂದ ಸಂಚರಿಸುತ್ತಿದ್ದರೂ ಕೇವಲ 30 ಮಂದಿಗೆ ಪ್ರಯಾಣಿಕರಿಗೆ ಸೀಮಿತವಾಗಿರುವುದರಿಂದ ಪ್ರತಿ ಕಿಮೀಗೆ 10 ರೂ. ನಷ್ಟ ಅನುಭವಿಸುತ್ತಿರುವುದಾಗಿ ಈಟಿವಿ ಭಾರತಕ್ಕೆ ಚಾಮರಾಜನಗರ ವಿಭಾಗ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.
ಇನ್ನು, ಲಾಕ್ಡೌನ್ಗೂ ಮುನ್ನ ಮಾಸಿಕ ಪಾಸ್ ಪಡೆದಿದ್ದ ಗ್ರಾಹಕರಿಗೆ ಉಳಿಕೆ ದಿನಗಳಲ್ಲಿ ಸಂಚರಿಸುವ ಅವಕಾಶ ಮಾಡಿಕೊಡಲು ಕೇಂದ್ರ ಕಚೇರಿ ನಿರ್ಧರಿಸಿದ್ದು ಶೀಘ್ರವೇ ಸುತ್ತೋಲೆ ಹೊರಡಿಸಲಾಗುವುದು ಎಂಬುದಾಗಿಯೂ ಅವರು ಮಾಹಿತಿ ನೀಡಿದ್ದಾರೆ.