ಚಾಮರಾಜನಗರ:ಜಿಲ್ಲೆಯಭೋಗಪುರ ಸಮೀಪದ ಜಮೀನೊಂದರಲ್ಲಿ ಭಾರತೀಯ ವಾಯುಸೇನೆಗೆ ಸೇರಿದ ಲಘು ವಿಮಾನ ಪತನವಾಗಿರುವ ಘಟನೆ ಇಂದು ನಡೆದಿದೆ. ಇಬ್ಬರು ಪೈಲೆಟ್ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾರಾಟದ ವೇಳೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತ ಪೈಲೆಟ್ಗಳು ಪ್ಯಾರಾಚೂಟ್ ಮೂಲಕ ವಿಮಾನದಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ವಾಯುಸೇನೆಯ ಕಿರಣ್ ಏರ್ ಪಥ್ ಹೆಸರಿನ U692 ಸಂಖ್ಯೆಯ ತರಬೇತಿ ವಿಮಾನ ಧರೆಗಪ್ಪಳಿಸಿದೆ. ಪೈಲೆಟ್ಗಳಾದ ಭೂಮಿಕಾ ಹಾಗೂ ತೇಜ್ ಪಾಲ್ ಎಂಬವರು ವಿಮಾನ ಚಲಾಯಿಸುತ್ತಿದ್ದರು. ನಿಯಂತ್ರಣ ಕಳೆದುಕೊಳ್ಳತ್ತಿದ್ದಂತೆ ಪ್ಯಾರಾಚೂಟ್ ಮೂಲಕ ಇಬ್ಬರೂ ಹಾರಿ ವಿಮಾನ ಪತನಗೊಂಡ 2 ಕಿ.ಮೀ ದೂರದಲ್ಲಿ ಬಿದ್ದಿದ್ದಾರೆ. ವಾಯುಸೇನೆ ಪಡೆ ಇಬ್ಬರನ್ನು ಪತ್ತೆ ಹಚ್ಚಿ ರಕ್ಷಣೆ ಮಾಡಿದೆ. ಇಬ್ಬರಿಗೂ ಕುತ್ತಿಗೆಯ ಬಳಿ ಸಣ್ಣಪುಟ್ಟ ಗಾಯವಾಗಿದ್ದು ಬೆಂಗಳೂರಿಗೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ಚಿಕಿತ್ಸೆಗೆ ಕರೆದೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಿಂಗಳಲ್ಲಿ ಎರಡನೇ ಘಟನೆ:ಇದುತಿಂಗಳಲ್ಲಿ ನಡೆದ ಎರಡನೇ ಘಟನೆದೆ. ಇದಕ್ಕೂ ಮುನ್ನ ರಾಜಸ್ಥಾನದಲ್ಲಿ ವಿಮಾನ ಪತನಗೊಂಡಿತ್ತು. ಮೇ.8 ರಂದು ಭಾರತೀಯ ವಾಯುಪಡೆಯ MiG-21 ಯುದ್ಧ ವಿಮಾನ ರಾಜಸ್ಥಾನದ ಹನುಮಾನ್‌ಗಢ್ ಬಳಿ ಬಿದ್ದಿತ್ತು. ಸೂರತ್‌ಗಢದಿಂದ ವಿಮಾನ ಹೊರಟಿದ್ದು ತಾಂತ್ರಿಕ ದೋಷದಿಂದಾಗಿ ನೆಲಕ್ಕಪ್ಪಳಿಸಿದೆ. ವಿಮಾನ ಬಿದ್ದ ರಭಸಕ್ಕೆ ಇಬ್ಬರು ಮಹಿಳೆಯರು ಸೇರಿ ಮೂವರು ಸಾವಿಗೀಡಾಗಿದ್ದರು. ವಿಮಾನದಲ್ಲಿದ್ದ ಪೈಲೆಟ್ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು.