ಚಾಮರಾಜನಗರ:ಅಕ್ರಮ ಸಂಬಂಧದ ಸಂಶಯದಿಂದ ಪತ್ನಿ ಬರ್ಬರವಾಗಿ ಚಾಕುವಿನಿಂದ ಇರಿದು, ಕೊಡಲಿಯಿಂದ ಕೊಚ್ಚಿ ಕೊಂದಿದ್ದ ಪತಿಗೆ ಚಾಮರಾಜನಗರ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.
ಗುಂಡ್ಲುಪೇಟೆ ತಾಲೂಕಿನ ಯರಿಯೂರು ಗ್ರಾಮದ ರಾಜು ಎಂಬಾತನ ಮೇಲಿನ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎನ್.ಆರ್.ಲೋಕಪ್ಪ ಜೀವಾವಧಿ ಶಿಕ್ಷೆ ಮತ್ತು 2 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ನೀಡಿದ್ದಾರೆ.
ಬೆಚ್ಚಿ ಬೀಳಿಸಿದ್ದ ಕೇಸ್: ಯರಿಯೂರು ಗ್ರಾಮದ ರಾಜು ಎಂಬಾತ ತನ್ನ ಪತ್ನಿ ಚಿಕ್ಕತಾಯಮ್ಮ ಬೇರೆಯವರೊಟ್ಟಿಗೆ ಅಕ್ರಮ ಸಂಬಂಧ ಇರಿಸಿಕೊಂಡಿರುವುದಾಗಿ ಶಂಕಿಸಿ, 2017ರ ಜುಲೈ 14ರ ರಾತ್ರಿ ಕೊಡಲಿಯಿಂದ ತಲೆ, ಹಣೆಗೆ ಹೊಡೆದು, ಚಾಕುವಿನಿಂದ ಮರ್ಮಾಂಗಕ್ಕೆ ಇರಿದು ಮೃಗೀಯ ವರ್ತನೆ ತೋರಿದ್ದನು.
ತೀವ್ರವಾಗಿ ಗಾಯಗೊಂಡ ಚಿಕ್ಕತಾಯಮ್ಮಳನ್ನು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದರು. ತೆರಕಣಾಂಬಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಮೊದಲಿಗೆ ಗುಂಡ್ಲುಪೇಟೆ ಜೆಎಂಎಫ್ಸಿ ನ್ಯಾಯಾಲಯಕ್ಕೆ ಅಪರಾಧಿ ವಿರುದ್ದ ಚಾರ್ಜ್ಶೀಟ್ ಸಲ್ಲಿಕೆಯಾಗಿತ್ತು. ಬಳಿಕ, ಜಿಲ್ಲಾ ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆಯಾಗಿತ್ತು. ಸರ್ಕಾರದ ಪರ ಉಷಾ ವಾದ ಮಂಡನೆ ಮಾಡಿದ್ದರು.
ಇದನ್ನೂ ಓದಿ:ಹೆಂಡತಿಗೆ ವಾರಕ್ಕೊಮ್ಮೆ ಹೋಟೆಲ್ ಊಟ ತಿನ್ನುವ ಆಸೆ: ಕೊಡಿಸದ ಗಂಡ, 2 ಮಕ್ಕಳ ಜೊತೆ ಆತ್ಮಹತ್ಯೆಗೆ ಶರಣಾದ ಪತ್ನಿ