ಚಾಮರಾಜನಗರ: ದೇವರಿಗೆ ನಾನಾ ಬಗೆಯ ಕೋರಿಕೆ, ಪ್ರಾರ್ಥನೆ, ಬೇಡಿಕೆ ಪತ್ರಗಳನ್ನು ಸಲ್ಲಿಸುವುದು ಸಾಮಾನ್ಯ. ಆದರೆ ಇಲ್ಲೋರ್ವ, ಒಂದು ಕುಟುಂಬ ಸರ್ವನಾಶ ಆಗಲೆಂಬ ವಿಚಿತ್ರ ಮತ್ತು ಆಘಾತಕಾರಿ ಬೇಡಿಕೆಯನ್ನು ದೇವರ ಮುಂದಿಟ್ಟಿದ್ದಾನೆ!. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನಗರದಲ್ಲಿನ ಲಕ್ಷ್ಮೀ ನಾರಾಯಣ ದೇವಾಲಯದ ಹುಂಡಿ ಎಣಿಕೆ ಕಾರ್ಯ ಮಂಗಳವಾರ ನಡೆಯಿತು. ಈ ವೇಳೆ ಭಕ್ತರ ಕುತೂಹಲಕಾರಿ ಕೋರಿಕೆ ಪತ್ರಗಳು ಸಿಕ್ಕಿವೆ.
ಈ ಪೈಕಿ, ಬಳ್ಳಾರಿ ಜಿಲ್ಲೆ ಎಂದು ನಮೂದಿಸಿರುವ ಭಕ್ತನೋರ್ವ, 'ಹನುಮಾರ್ ರಾಮ ನಾಯಕ ಎಂಬಾತ ಬಾಯಲ್ಲಿ ರಕ್ತ ಬಿದ್ದು ಸಾಯಬೇಕು. ಇದನ್ನು ನೋಡಿ ನೀಲಾಬಾಯಿ ಕೊರಗಿ ಕೊರಗಿ ಸಾಯಲಿ. ನೀಲಗಿರಿ ನಾಯಕ, ಲೋಕೇಶಿ ನಾಯಕ, ಮುಕ್ಕಿಬಾಯಿ, ಇವರೆಲ್ಲರೂ ಕೂಡಾ ಅವರನ್ನು ನೋಡಿ ನರಳಿ ಸಾಯಬೇಕು. ಅವರುಗಳು ನಮ್ಮ ಮನೆಯ ಹತ್ತಿರವೇ ಬಾರದ ಹಾಗೆ ಮಾಡಬೇಕು. ಇವರೆಲ್ಲರೂ ಒಂದು ವರ್ಷದೊಳಗೆ ಸಾಯಬೇಕು' ಎಂದು ಕಾಗದದಲ್ಲಿ ಬರೆದು ಹುಂಡಿಯಲ್ಲಿ ಹಾಕಿದ್ದಾನೆ. ಬಳ್ಳಾರಿ ಭಕ್ತನ ಕಾಗದ ಓದಿದ ಹುಂಡಿ ಎಣಿಕೆ ಸಿಬ್ಬಂದಿ ಅರೆಕ್ಷಣ ದಂಗಾಗಿದ್ದಾರೆ. ಈ ರೀತಿಯೆಲ್ಲ ಬೇಡಿಕೆ ಇರುತ್ತವೆಯೇ?, ಸಾವನ್ನು ಬಯಸುವ ಮಟ್ಟಿಗೆ ಆತ ನೊಂದಿರುವವನೇ? ಎಂದು ಹೌಹಾರಿದ್ದಾರೆ.
ಅಂತರ್‌ಧರ್ಮೀಯ ಪ್ರೀತಿ ಪತ್ರ: ದೇವರಿಗೆ ಒಂದು ಅಂತರ್‌ಧರ್ಮೀಯ ಪ್ರೀತಿ ಪತ್ರವೂ ಸಿಕ್ಕಿದೆ. ಅದರಲ್ಲಿ, ಯುವತಿಯೊಬ್ಬಳು ಶಾಹಿದ್ ಖಾನ್ ವರ್ಷಕ್ಕೆ ಒಂದು ಬಾರಿಯಾದರೂ ದಿಲ್ಲಿಯಿಂದ ಬರಬೇಕು. ನಾನು ಹಿಂದೂ ಅವನು ಬೇರೆ ಧರ್ಮದವನು. ಆದರೆ ನಾನು ತಪ್ಪು ಮಾಡುತ್ತಿಲ್ಲ. ನನಗೆ ಅವನಿಷ್ಟ. ಅವನಿಗೆ ನಾನು ಇಷ್ಟ. ನನ್ನ ಜೀವನವೇ ಅವನು. ಈ ಬೇಡಿಕೆ ಈಡೇರಿದರೆ ಪ್ರತಿ ತಿಂಗಳಿಗೊಮ್ಮೆ ನಿನ್ನ ಸನ್ನಿಧಿಗೆ ಬರುವೆ ಎಂದು ಕಾಗದದಲ್ಲಿ ಬರೆದು ಹರಕೆ ಕಟ್ಟಿಕೊಂಡಿದ್ದಾಳೆ.