ರಾಜಕೀಯ ಚಾಣಕ್ಯ ಬಿ ಎಲ್ ಸಂತೋಷ್ ಚಾಮರಾಜನಗರ ಭೇಟಿ ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ನಡೆದ ಬಳಿಕ ಜಿಲ್ಲೆಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಎಂಟ್ರಿ ಕೊಟ್ಟು ಪಕ್ಷದ ಪ್ರಮುಖರ ಜೊತೆ ಸಭೆ ನಡೆಸಿದರು. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಾಧ್ಯಮದವರನ್ನು ಹೊರಗಿಟ್ಟು ಅವರು ಸಭೆ ನಡೆಸಿದ್ದು, ಇದರಲ್ಲಿ ಸಂಸದ ವಿ. ಶ್ರೀನಿವಾಸಪ್ರಸಾದ್, ಬಿಜೆಪಿ ಶಾಸಕರಾದ ಎನ್.ಮಹೇಶ್, ನಿರಂಜನ ಕುಮಾರ್ ಹಾಗು ಟಿಕೆಟ್ ಆಕಾಂಕ್ಷಿಗಳಾದ ಎಂ.ರಾಮಚಂದ್ರು, ನಿಶಾಂತ್, ವೆಂಕಟೇಶ್, ಡಾ.ಪ್ರೀತಂ ಹಾಗೂ ಮಂಡಲ ಪ್ರಮುಖರು, ಪಕ್ಷದ ಇತರೆ ಪದಾಧಿಕಾರಿಗಳು ಭಾಗಿಯಾಗಿದ್ದರು.
ಸಂತೋಷ್ ಏನಂದ್ರು?:ಶಕ್ತಿ ಪ್ರಮುಖರ ಸಭೆಯಲ್ಲಿ ಸಂತೋಷ್ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಪಕ್ಷ. ಇಲ್ಲಿ ರಥವನ್ನು ಬೇರೆ ಪಕ್ಷಗಳಂತೆ ಒಬ್ಬರಿಬ್ಬರು ಎಳೆಯುವುದಿಲ್ಲ. ಕಾರ್ಯಕರ್ತರೇ ತೊಡಗಿ ಗೆಲುವು ತರುತ್ತಾರೆ. ನಮ್ಮದು ಪುರಿ ಜಗನ್ನಾಥನ ರೀತಿ ರಥವನ್ನು ಲಕ್ಷಾಂತರ ಮಂದಿ ಎಳೆಯುತ್ತಾರೆ. ಚಾಮರಾಜನಗರದ 4 ಕ್ಷೇತ್ರಗಳಲ್ಲೂ ಈ ಬಾರಿ ಕಮಲ ಅರಳಿಸಬೇಕು ಎಂದು ಪ್ರಮುಖರಿಗೆ ಕರೆ ಕೊಟ್ಟಿದ್ದಾರೆ.
ಓರ್ವ ಅಭ್ಯರ್ಥಿ ಮೇಲೆ ಎಲ್ಲರದ್ದೂ ಒಂದೊಂದು ಅಭಿಪ್ರಾಯ ಇರಲಿದೆ. 4 ಸಾವಿರ ಆಕಾಂಕ್ಷಿಗಳಿದ್ದಾರೆ, 4 ಸಾವಿರ ಅಭಿಪ್ರಾಯ ಇರುತ್ತದೆ. ಪಕ್ಷ ಯಾರನ್ನು ಆಯ್ಕೆ ಮಾಡುತ್ತದೆಯೋ ಅವರಿಗೆ ನಮ್ಮ ಬೆಂಬಲ ಇರಬೇಕು. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಬೂತ್ ಮಟ್ಟ ಎಂದರೆ ಭಾಷಣ ಮಾಡುವ ಹಂತವಲ್ಲ, ಕೆಲಸ ಮಾಡುವ ಹಂತ ಎಂಬುದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಅನಿವಾಸಿ ಮತದಾರರ ಮಾಹಿತಿ: ಮತದಾರರ ಪಟ್ಟಿಯಲ್ಲಿ ವ್ಯಕ್ತಿಯ ಹೆಸರು ಇರುತ್ತದೆ. ಆದರೆ ಆ ವ್ಯಕ್ತಿ ಬೇರೆಲ್ಲೋ ಇರುತ್ತಾರೆ. ಒಂದೊಂದು ಊರಿನಲ್ಲೂ ಈ ಅನಿವಾಸಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಇವರಿಗೂ ಕೂಡ ಬಿಜೆಪಿ ಕಾರ್ಯಕ್ರಮಗಳನ್ನು ತಿಳಿಸಿ ಮತದಾನದಿಂದ ಅವರು ಹೊರಗುಳಿಯದಂತೆ ಮಾಡಿ ಬಿಜೆಪಿ ಮತದಾರರನ್ನಾಗಿಸಬೇಕು. ನಮ್ಮ ಬಿಜೆಪಿಗೆ ಇಂತಿಷ್ಟು ಮತಬ್ಯಾಂಕ್ ಎಂದು ಇದ್ದೇ ಇರಲಿದೆ. ಅದಕ್ಕೆ ಜನರನ್ನು ಆ್ಯಡ್ ಮಾಡುತ್ತಾ ಹೋಗಬೇಕೆ ಹೊರತು ಡಿಲಿಟ್ ಮಾಡಬಾರದು. ಬೂತ್ ಮಟ್ಟದಲ್ಲಿ ಭಾಷಣ ಮಾಡಬೇಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆ, ಕೆಲಸ ಹೇಳಿ ಎಂದು ಪ್ರಮುಖರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ಗೆ ಮದ್ದರೆಯುವ ಚುನಾವಣೆ: ಮುಂಬರುವ ಚುನಾವಣೆ ಕಾಂಗ್ರೆಸ್ಗೆ ಮದ್ದು ಅರೆಯುವ ಚುನಾವಣೆ ಎಂದು ವ್ಯಾಖ್ಯಾನಿಸಿರುವ ಬಿ.ಎಲ್. ಸಂತೋಷ್ ದೇವನಹಳ್ಳಿ ತಾಲೂಕಿನಲ್ಲೇ ಟಿಪ್ಪು ಕೂಡ ಹುಟ್ಟಿದ್ದು, ಕೆಂಪೇಗೌಡರು ಹುಟ್ಟಿದ್ದು, ಆದರೆ ಕೆಂಪೇಗೌಡರನ್ನು ಮತ್ತೆ ನೆನಪಿಸಲು ಬಿಜೆಪಿ ಬರಬೇಕಾಯಿತು. ರಾಣಿ ಅಬ್ಬಕ್ಕ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಸ್ಮರಿಸಲು ಬಿಜೆಪಿ ಬರಬೇಕಾಯಿತು ಎಂದು ಕೈ ಪಾಳೆಯದ ವಿರುದ್ಧ ಕಿಡಿಕಾರಿದರು.
ಹಳೇ ಮೈಸೂರು ಭಾಗ ವಶಕ್ಕೆ ಪ್ಲ್ಯಾನ್: ಹಳೇ ಮೈಸೂರು ಭಾಗವನ್ನು ಕಮಲದ ವಶ ಮಾಡಿಕೊಳ್ಳಬೇಕೆಂದು ಈಗಾಗಲೇ ಬಿಜೆಪಿ ಉನ್ನತ ಮಟ್ಟದ ನಾಯಕರು ಪ್ಲ್ಯಾನ್ ಮಾಡುತ್ತಿದ್ದು ಸಂತೋಷ್ ಅವರ ಈ ಸಭೆ ಮಹತ್ವ ಪಡೆದುಕೊಂಡಿದೆ. ಜೊತೆಗೆ, ಶಾಸಕರು, ಟಿಕೆಟ್ ಆಕಾಂಕ್ಷಿಗಳಿಗೆ, ಶಕ್ತಿ ಪ್ರಮುಖರಿಗೆ ಕೆಲವು ಮಹತ್ವಪೂರ್ಣ ಸಲಹೆಗಳನ್ನು ಸಂತೋಷ್ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಕಡೇ ಚುನಾವಣೆ, ಕಣ್ಣೀರು ರಾಜಕಾರಣ ಮಾಡುತ್ತಾರೆ : ದಳಪತಿಗಳ ಕುರಿತು ಬಿ ಎಲ್ ಸಂತೋಷ್ ವ್ಯಂಗ್ಯ