ಚಾಮರಾಜನಗರ :ಪೆಟ್ರೋಲ್-ಡೀಸೆಲ್ ಬೆಲೆ ದಿನೇದಿನೆ ಹೆಚ್ಚಾಗುತ್ತಿದೆ. ಶ್ರೀಸಾಮಾನ್ಯರು ದುಬಾರಿ ದೇಶದಲ್ಲಿ ಜೀವನ ಸಾಗಿಸಲು ಹೆಣಗಾಡುತ್ತಿದ್ದಾರೆ ಎಂದು ಮಾಜಿ ಸಚಿವ ಯು ಟಿ ಖಾದರ್ ಹೇಳಿದರು.
ನಗರದಲ್ಲಿ ಡಿಸಿಸಿ ಆಯೋಜಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಗಾಗಿ ಬೆಲೆ ಹೆಚ್ಚಾಗಲಿ, ಜನರು ಹಣ ಹೆಚ್ಚು ನೀಡಲಿ ಎನ್ನುವ ಭಕ್ತರಿಗೆ ಪ್ರತ್ಯೇಕ ಪೆಟ್ರೋಲ್ ಬಂಕ್ ನಿರ್ಮಿಸಿ 1 ಲೀಟರ್‌ಗೆ 1,000 ಸಾವಿರ ರೂ. ಕೊಡಲಿ ಎಂದು ಬಿಜೆಪಿ ಕಾರ್ಯಕರ್ತರ ವಿರುದ್ಧ ಹರಿಹಾಯ್ದರು.
ದೇಶಕ್ಕಾಗಿ ಬೆಲೆ ಹೆಚ್ಚಾಗಲಿ ಎನ್ನುವ ಭಕ್ತರಿಗೆ ಬೇರೆ ಪೆಟ್ರೋಲ್ ಬಂಕ್ ಕಟ್ಟಿಸಿಕೊಳ್ಳಲಿ : ಖಾದರ್ ಪೆಟ್ರೋಲ್ -ಡೀಸೆಲ್ ಬೆಲೆ ಹೆಚ್ಚಾದಂತೆ ನಿತ್ಯ ಬಳಕೆ ವಸ್ತುಗಳ ಬೆಲೆಯೂ ಹೆಚ್ಚಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಕ್ರೂಡ್ ಆಯಿಲ್ ಮೇಲೆ 3 ರೂ. ಟ್ಯಾಕ್ಸ್ ಹಾಕಿದ್ದೆವು. ಆದರೆ, ಬಿಜೆಪಿ 45 ರೂ. ತೆರಿಗೆ ಹಾಕಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಕರುಣೆ, ಮಾನವೀಯತೆ ಇಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಎಂಜಿನ್ ಇಲ್ಲದ ಸರ್ಕಾರವಾಗಿದೆ ಎಂದು ಹರಿಹಾಯ್ದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದ ವೇಳೆ ಬಡವರ ಅನುಕೂಲಕ್ಕಾಗಿ ಇಂದಿರಾ ಕ್ಯಾಂಟೀನ್ ಆರಂಭಿಸಿತು. ಆದರೆ, ಬಿಜೆಪಿ ಸರ್ಕಾರ ಇಂದು ಇಂದಿರಾ ಕ್ಯಾಂಟೀನ್‌ಗಳನ್ನು ಮುಚ್ಚಿ ಬಡವರ ಮೇಲೆ ಪ್ರಹಾರ ಮಾಡಿದೆ ಎಂದು ಗುಡುಗಿದರು.
ವಿಧಾನ ಸಭೆಯಲ್ಲಿ ನಾನು ಧೈರ್ಯವಾಗಿ ಎದ್ದು ನಿಂತು ಮಾತನಾಡಲು ಆರ್.ಧೃವನಾರಾಯಣ್ ಕಾರಣ. ಅವರ ತರಬೇತಿಯಿಂದ ನಾನು ವಿಧಾನಸಭೆ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೇನೆ. ಹೀಗಾಗಿ, ಅವರು ನನಗೆ ಗುರುವಾಗಿದ್ದಾರೆ. ಕಾಂಗ್ರೆಸ್ ಹೈಮಾಂಡ್ ಧೃವನಾರಾಯಣ್ ಅವರ ಕಾರ್ಯದಕ್ಷತೆ ಗುರುತಿಸಿ ಅವರಿಗೆ ಕೆಪಿಸಿಸಿ ನೂತನ ರಾಜ್ಯ ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ ಎಂದರು.
ಮೋದಿಗೆ ಎಣ್ಣೆ ಕಂಡ್ರೆ ಆಗಲ್ಲ :ಹನೂರು ಶಾಸಕ ಆರ್.ನರೇಂದ್ರ ಮಾತನಾಡಿ, ಮೋದಿಯವರಿಗೆ ಎಣ್ಣೆ ಕಂಡ್ರೆ ಆಗಲ್ಲ ಅನ್ಸುತ್ತೆ. ಅದಕ್ಕೆ, ಅಡುಗೆ ಎಣ್ಣೆ, ವಾಹನಗಳಿಗೆ ಹಾಕುವ ಎಣ್ಣೆ ಎರಡರ ಬೆಲೆಯೂ ನಿರಂತರವಾಗಿ ಏರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.