ಚಾಮರಾಜನಗರ:ರಾಮಸಮುದ್ರದಲ್ಲಿರುವ ದೀನಬಂಧು ಖಾಸಗಿ ಶಾಲೆ ಅತ್ಯಲ್ಪ ಶುಲ್ಕ ಪಡೆದು ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡ್ತಿದೆ. ಎಲ್‌ಕೆಜಿಗೆ ವಾರ್ಷಿಕ 500 ರೂ. ಶುಲ್ಕವಿದ್ದು, 1ನೇ ತರಗತಿಗೆ 750 ರೂ, 5, 6, 7ನೇ ತರಗತಿಗೆ ₹1,250, 8, 9 ಹಾಗೂ ಎಸ್ಸೆಸ್ಸೆಲ್ಸಿ ಮಕ್ಕಳಿಗೆ 1,750 ವಾರ್ಷಿಕ ಶುಲ್ಕ ನಿಗದಿಯಾಗಿದೆ. ಒಮ್ಮೆಗೆ ಶುಲ್ಕ ಪಾವತಿಸಲು ಅಸಾಧ್ಯವಾದರೆ ಪಾಲಕರು, 2-3 ಕಂತುಗಳಲ್ಲೂ ನೀಡಬಹುದಾಗಿದೆ.
ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಮಗ ಜಯದೇವ್ ಬಡ, ಹಿಂದುಳಿದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರಕಬೇಕೆಂದು 1999ರಲ್ಲಿ ಆರಂಭಿಸಿದ ಈ ಶಾಲೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ಬಂದಿದ್ದು, ಈಗ ಎಲ್‌ಕೆಜಿಯಿಂದ ಎಸ್ಸೆಸ್ಸೆಲ್ಸಿ ಅವರಿಗೆ ಶಿಕ್ಷಣ ನೀಡಲಾಗುತ್ತಿದೆ. ಕನ್ನಡ ಮಾಧ್ಯಮದ ಖಾಸಗಿ ಶಾಲೆಯಾಗಿರುವುದು ಮತ್ತೊಂದು ವಿಶೇಷ.
ಅನಾಥ ಮಕ್ಕಳು, ತಂದೆ ಇಲ್ಲವೇ ತಾಯಿ ಕಳೆದುಕೊಂಡವರು, ಶಿಕ್ಷಣಕ್ಕೆ ಪೂರಕ ವಾತಾವರಣವಿಲ್ಲದ ಮಕ್ಕಳಿಗೆ ಊಟ, ವಸತಿಯೊಂದಿಗೆ ಶಿಕ್ಷಣ ನೀಡಲಾಗುತ್ತಿದೆ. ಈ ವರ್ಷದಲ್ಲಿ 430 ಮಕ್ಕಳು ದಾಖಲಾಗಿದ್ದಾರೆ. ಒಂದು ತರಗತಿಗೆ 35 ವಿದ್ಯಾರ್ಥಿಗಳನ್ನಷ್ಟೇ ದಾಖಲು ಮಾಡಿಕೊಳ್ಳಲಾಗುತ್ತದೆ. ಪ್ರತಿ ಮಗುವಿನ ಕಲಿಕೆಯ ಮೇಲೆ ನಿಗಾ ಇಡಲು ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸಿ ಮಗುವಿನ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಿಕೊಡುತ್ತಿದೆ.