ಚಾಮರಾಜನಗರ: ಬಾಲಕಿ ಮೇಲೆ ಚಿರತೆ ದಾಳಿ ನಡೆಸಿ ಬಲಿ ಪಡೆದ ಪ್ರಕರಣ ಮಾಸುವ ಮುನ್ನವೇ ಅದೇ ರೀತಿಯ ಮತ್ತೊಂದು ಘಟನೆ ಚಾಮರಾಜನಗರದ ಯಳಂದೂರು ತಾಲೂಕಿನ ಮಲ್ಲಿಗೆ ಹಳ್ಳಿಯಲ್ಲಿ ನಡೆದಿದೆ. ಬಾಲಕನ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದೆ. ಮಲ್ಲಿಗೆಹಳ್ಳಿ ಗ್ರಾಮದ ಹರ್ಷಿತ್ (9) ದಾಳಿಗೊಳಗಾದ ಬಾಲಕ.
ಗ್ರಾಮದ ಪ್ರಾಥಮಿಕ ಶಾಲೆ ಮುಂಭಾಗದಿಂದ ಮನೆಗೆ ತೆರಳುವಾಗ ಅವಿತು ಕುಳಿತಿದ್ದ ಚಿರತೆ ಬಾಲಕನ ಮೇಲೆ ದಾಳಿ ಮಾಡಿದೆ. ಇದನ್ನು ಕಂಡ ಜನರು ಚೀರಾಟಿ ಕೂಗಾಡಿದ್ದಾರೆ. ಜನರ ಕಿರುಚಾಟಕ್ಕೆ ಬೆದರಿದ ಚಿರತೆ ಬಾಲಕನ್ನು ಬಿಟ್ಟು ಗದ್ದೆಗಳತ್ತ ಓಡಿದೆ. ಹರ್ಷಿತ್ನ ಮುಖ, ಗಂಟಲು, ಕಾಲು, ಹೊಟ್ಟೆಯ ಭಾಗಕ್ಕೆ ಚಿರತೆ ಗೀರಿ ಕಚ್ಚಿ ಗಾಯಗೊಳಿಸಿದ್ದು, ಯಳಂದೂರು ಆಸ್ಪತ್ರೆಯಲ್ಲಿ ಬಾಲಕನಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದೆ.
4 ದಿನಗಳಿಂದ ಓಡಾಟ ನಡೆಸಿದ್ದ ಚಿರತೆ: ಕಳೆದ ಮೂರು ದಿನಗಳಿಂದ ಯಳಂದೂರು ತಾಲೂಕಿನ ಕೆಸ್ತೂರು, ಮಲ್ಲಿಗಹಳ್ಳಿ, ಕಟ್ನವಾಡಿ, ಹೊಸೂರು ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಹಾಗಾಗಿ ಅರಣ್ಯ ಇಲಾಖೆ ಮಲ್ಲಿಗೆಹಳ್ಳಿ ಸೇರಿದಂತೆ 6 ಕಡೆ ಬೋನುಗಳನ್ನು ಇಟ್ಟು ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿದ್ದರು. ಆದರೆ, ಚಿರತೆ ಸೆರೆಯಾಗದೇ ಬಾಲಕನ ಮೇಲೆ ಎರಗಿದ ಆತಂಕಕಾರಿ ಘಟನೆ ನಡೆದಿದೆ.