ಚಾಮರಾಜನಗರ: ಮಾನಸಿಕ ಒತ್ತಡಕ್ಕೆ ನಗರದ ಖಾಸಗಿ ಕಾಲೇಜಿನ ಉಪನ್ಯಾಸಕಿಯೊಬ್ಬರು ಅಸುನೀಗಿದ್ದು ನೂರಾರು ವಿದ್ಯಾರ್ಥಿಗಳು, ಸಹೋದ್ಯೋಗಿಗಳು ಹಾಗೂ ಪಾಲಕರು ಮರುಗಿದ್ದಾರೆ. ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ಚಂದನಾ (26) ಆತ್ಮಹತ್ಯೆಗೆ ಶರಣಾದವರು.
ಚಂದನಾ ಚಾಮರಾಜನಗರದ ಜೆಎಸ್‌ಎಸ್ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜೆಎಸ್‌ಎಸ್ ಕಾಲೇಜಿನ ಹಾಸ್ಟೆಲ್‌ನಲ್ಲೇ ವಾಸ್ತವ್ಯ ಹೂಡಿದ್ದರು. ಇವತ್ತು ಅವರ ಹುಟ್ಟುಹಬ್ಬವಿತ್ತು. ಹೀಗಾಗಿ, ಸ್ನೇಹಿತರು, ವಿದ್ಯಾರ್ಥಿಗಳು ಶುಭಾಶಯ ಕೋರಿದ್ದಾರೆ. ಇದಾದ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಜೊತೆ ಕೊಠಡಿಯಲ್ಲಿದ್ದ ಸ್ನೇಹಿತರು ಹೊರಹೋದ ನಂತರ ನೇಣು ಬಿಗಿದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಡೆತ್ನೋಟ್ನಲ್ಲಿ ಮಾನಸಿಕ ಒತ್ತಡ ಬಯಲು: ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಬರೆದಿರುವ ಚಂದನಾ, ಯಾಕೆ ಯಾರೂ ನನ್ನ ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಪ್ರಾರಂಭಿಸಿದ್ದು, ತನ್ನ ಮನದಾಳದ ನೋವಿಗೆ ಅಕ್ಷರ ರೂಪ ನೀಡಿ, ಕೊನೆಗೆ "ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಸಾವಿಗೆ ನಾನೇ ಕಾರಣ" ಎಂದು ಬರೆದಿದ್ದಾರೆ.
ತನ್ನ ಇಬ್ಬರು ಅಕ್ಕಂದಿರಿಗೆ ಕ್ಷಮೆ ಕೇಳಿರುವ ಚಂದನಾ, ತಂಗಿಯನ್ನು ಉದ್ದೇಶಿಸಿ, "ಯಾವುದೇ ಕಾರಣಕ್ಕೂ ಉಪನ್ಯಾಸಕಿ ಹುದ್ದೆಗೆ ಬರಬೇಡ" ಎಂದು ತನ್ನ ಕೊನೆಯ ಸಲಹೆ ಕೊಟ್ಟಿದ್ದಾರೆ.
"ಮಗಳು ಲೆಕ್ಚರರ್ ಆಗಿ ವರ್ಕ್ ಮಾಡ್ತಾ ಇದ್ಲು. ಮನೆಕಡೆಯೂ ಗಮನ ಕೊಡುತ್ತಿದ್ದಳು. ಒಳ್ಳೆ ಹುಡುಗಿ. ಈ ಕಡೆಯೂ ವರ್ಕ್ ಪ್ರೆಶರ್, ಆ ಕಡೆಯೂ ವರ್ಕ್ ಪ್ರೆಶರ್ ಇತ್ತು. ಸ್ವಲ್ಪ ಮುಂಗೋಪಿ. ಆದರೆ, ಹೆಂಗೆ ಆತ್ಮಹತ್ಯೆ ಮಾಡಿಕೊಂಡ್ಲೋ ಏನೋ ಹೇಗೆ ಹೇಳಲಿ?. ಅದು ಆ ದೇವರಿಗೆ ಗೊತ್ತು. ಇವತ್ತು ಹುಟ್ದಬ್ಬ ಇತ್ತು. ಮನೆಗೆ ಕರೆದುಕೊಂಡು ಹೋಗಿ ಗ್ರ್ಯಾಂಡ್ ಆಗಿ ಆಚರಣೆ ಮಾಡೋಣಾ ಅಂತಾ ಅಂದುಕೊಂಡಿದ್ದೆ. ಆದರೆ, ಇವಾಗ ಹಿಂಗಾಯ್ತು. ನಿನ್ನೆ ರಾತ್ರಿ 8: 30ಕ್ಕೆ ನಾನು ಫೋನ್ ಮಾಡಿದ್ದೆ. ಆಗ ಫೋನ್ ಸ್ವಿಚ್ ಆಫ್ ಬರ್ತಿತ್ತು. ಪುನಃ ವಾರ್ಡನ್ಗೆ ಫೋನ್ ಮಾಡಿ ವಿಚಾರಿಸಿದೆ. ಅವರು ಒಂದು ಗಂಟೆಯ ನಂತರ ನಿಮ್ಮ ಮಗಳಿಗೆ ಹುಷಾರಿಲ್ಲ ಅಂತಾ ಹೇಳಿ ಕರೆಸಿಕೊಂಡ್ರು. ಆಗ ಹೀಗಾಗಿತ್ತು" ಎಂದು ಮೃತಳ ತಂದೆ ಮಹದೇವಸ್ವಾಮಿ ಭಾವುಕರಾದರು.
ತಂದೆ ಜೊತೆ ಕೊನೆಯ ಬಾರಿ ಪಾನಿಪೂರಿ:ಇಂದು ಚಂದನಾ ಅವರ ಹುಟ್ಟುಹಬ್ಬವಾಗಿದ್ದು, ಆಕೆಯ ತಂದೆ ಕೇಕ್ ಕಟ್ ಮಾಡಿಸಲು ಸಕಲ ಸಿದ್ಧತೆ ನಡೆಸಿದ್ದರು. ಸೋಮವಾರ ಸಂಜೆಯಷ್ಟೇ ಮಗಳೊಟ್ಟಿಗೆ ಪಾನಿಪೂರಿ ಸೇವಿಸಿ ಊರಿಗೆ ಬರುವಂತೆ ಹೇಳಿದ್ದರಂತೆ. ಬೆಳಗ್ಗೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು. ಕೂಡಲೇ ಅವರ ತಂದೆ ಹಾಸ್ಟೆಲ್‌ನ ಸೆಕ್ಯೂರಿಟಿಗೆ ಕರೆ ಮಾಡಿ ಚಂದನಾ ಫೋನ್ ಎತ್ತದೆ ಇರುವುದನ್ನು ತಿಳಿಸಿದ್ದಾರೆ. ಈ ವೇಳೆ ಚಂದನಾ ಕೊಠಡಿ ಬಳಿ ಹೋದ ಸೆಕ್ಯೂರಿಟಿಗೆ ಅವರು ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ.
ಕೂಡಲೇ ಆತ ಹಾಸ್ಟೆಲ್‌ನ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾನೆ. ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಮಹಜರ್ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ, ಖರ್ಗೆ, ಡಿಕೆಶಿ ಹೀಗೆ ಹತ್ತಾರು ಗುಂಪುಗಳಿವೆ: ರೇಣುಕಾಚಾರ್ಯ