ಕೊಳ್ಳೇಗಾಲ (ಚಾಮರಾಜನಗರ): ನಗರದ ಮರಡಿಗುಡ್ಡ ಹಿಂಭಾಗದಲ್ಲಿರುವ ಪತ್ರಕರ್ತರ ಸಂಘದ ಕಟ್ಟಡ ನಿರ್ಮಾಣಕ್ಕಿದ್ದ 10 ಸೆಂಟ್ ಕಂದಾಯ ಭೂಮಿಯಾದ ಖಾಲಿ ನಿವೇಶನವನ್ನು ಏಕಾಏಕಿ ಅರಣ್ಯ ಇಲಾಖೆ ಒತ್ತುವರಿ ಮಾಡಿದೆ ಎಂದು ಪತ್ರಕರ್ತರು ದೂರು ನೀಡಿದ್ದರು. ಈ ಹಿನ್ನೆಲೆ ಶಾಸಕ ಎನ್.ಮಹೇಶ್ ನೇತೃತ್ವದಲ್ಲಿ ಅರಣ್ಯ ಇಲಾಖೆಯಲ್ಲಿ ಒತ್ತುವರಿ ವಿಚಾರವಾಗಿ ಸಭೆ ನಡೆಸಲಾಯಿತು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಟರಾಜು ಮಾತನಾಡಿ, ನಗರದ ಮರಡಿಗುಡ್ಡ ಹಿಂಭಾಗವಿರುವ 10 ಸೆಂಟ್ ಕಂದಾಯ ನಿವೇಶನ 2012ರಲ್ಲಿ ಪತ್ರಕರ್ತರ ಭವನಕ್ಕೆ ಜಿಲ್ಲಾಧಿಕಾರಿಯಿಂದ ಮಂಜೂರಾಗಿತ್ತು. ಆದರೆ ಇದೀಗ ಅರಣ್ಯ ಇಲಾಖೆ ನಮ್ಮ ಜಾಗಕ್ಕೆ ಬೇಲಿ ಹಾಕಿ ಒತ್ತುವರಿ ಮಾಡಿಕೊಂಡಿದೆ. ವಿಚಾರ ತಿಳಿದು ಪತ್ರಕರ್ತರ ಸಂಘದ ಜಾಗ ಇದು ಎಂದು ಬೋರ್ಡ್ ಬರೆಯಲಾಗಿತ್ತು. ಆದರೆ ಆ ಬೋರ್ಡ್ಗೆ ಬಣ್ಣ ಬಳಿಯಲಾಗಿದೆ ಎಂದರು.
ಚರ್ಚೆಯ ಬಳಿಕ ಮಾತನಾಡಿದ ಶಾಸಕ ಎನ್.ಮಹೇಶ್, ಪತ್ರಕರ್ತರಿಗೆ ಮಂಜೂರಾದ ನಿವೇಶನಕ್ಕೆ ಹೇಗೆ ಬೇಲಿ ಹಾಕಿ ಒತ್ತುವರಿ ಮಾಡಿದ್ದೀರಿ?, ಡಿಎಫ್ಒಗೆ ಪ್ರಶ್ನಿಸಿ, ನಿಮ್ಮ ಜಾಗವೆಂಬ ಆಧಾರವಿದ್ದರೆ ರೆಕಾರ್ಡ್ ತೋರಿಸಿ ಎಂದು ತಾಕೀತು ಮಾಡಿದರು.