ಚಾಮರಾಜನಗರ:ರಾಜ್ಯದ ಏಕೈಕ ಗೌರಿ ದೇವಾಲಯ ಎಂದೇ ಹೆಸರಾದ ಚಾಮರಾಜನಗರ ತಾಲೂಕಿನ ಕುದೇರು ಗ್ರಾಮದ ಸ್ವರ್ಣಗೌರಿ ದೇವಾಲಯದಲ್ಲಿ ಕೊರೊನಾ ಭೀತಿಯಿಂದಾಗಿ ಭಕ್ತರಿಗೆ ಪ್ರವೇಶ ನಿರ್ಬಂಧಿಸಿ ಸಾಂಪ್ರದಾಯಿಕ ಪೂಜೆ ನೆರವೇರಿಸಲಾಗಿದೆ.
ಕೊರೊನಾ ಭೀತಿ ಹಿನ್ನೆಲೆ ಭಕ್ತರಿಗೆ ನಿರ್ಬಂಧ ಸಂತೇಮರಹಳ್ಳಿ ಸಮೀಪದ ಕುದೇರು ಗ್ರಾಮದಲ್ಲಿ ಗಣಪನ ಬದಲಾಗಿ ಗೌರಿಯನ್ನು ಪ್ರತಿಷ್ಠಾಪಿಸುವ ಸಂಪ್ರದಾಯವಿದ್ದು ಗ್ರಾಮದವರೆಲ್ಲಾ ಸೇರಿ ಒಂದೇ ಕಡೆ ಗೌರಿಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾರೆ.
ಕೆರೆಯಿಂದ ಮರಳು ಗೌರಿಯನ್ನು ತಂದು 5 ದಿನದ ಬಳಿಕ ಸ್ವರ್ಣಕವಚದಿಂದ ಗೌರಿಯನ್ನು ಅಲಂಕರಿಸಿ 12ನೇ ದಿನದಂದು ಮೆರವಣಿಗೆ ಮೂಲಕವೇ ಮೂರ್ತಿಯನ್ನು ವಿಸರ್ಜಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ.
ರಾಜ್ಯದ ಏಕೈಕ ಸ್ವರ್ಣಗೌರಿ ದೇಗುಲ ದೇವಾಲಯದಲ್ಲಿ12 ದಿನದವರೆಗೂ ನಿತ್ಯಪೂಜೆ ನಡೆಯಲಿದ್ದು, ನವ ದಂಪತಿ ಬಾಗಿನ ಅರ್ಪಿಸುತ್ತಾರೆ. ಮಕ್ಕಳಿಲ್ಲದವರು ಸಂತಾನ ಭಾಗ್ಯಕ್ಕಾಗಿ ಚಿನ್ನ, ಬೆಳ್ಳಿಯ ತೊಟ್ಟಿಲನ್ನು, ಯುವತಿಯರು ಕಂಕಣ ಭಾಗ್ಯಕ್ಕಾಗಿ ಮಾಂಗಲ್ಯವನ್ನು ಅರ್ಪಿಸುತ್ತಾರೆ. ಗಂಡಾಂತರದಿಂದ ಪಾರಾಗಲು ದೀಪೋತ್ಸವ, ದೀಪಾರಾಧನೆ ಸೇರಿದಂತೆ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ನಾನಾ ಹರಕೆಗಳನ್ನು ಹಬ್ಬದ ದಿನದಂದು ಅರ್ಪಿಸುತ್ತಾರೆ.
ಸ್ವರ್ಣಗೌರಿಯ ದರ್ಶನಕ್ಕಾಗಿ ರಾಜ್ಯದ ನಾನಾ ಕಡೆಯಿಂದ ಭಕ್ತರು ಆಗಮಿಸಿ ಪೂಜೆ ಸಲ್ಲಿಸುವುದು ಸಾಮಾನ್ಯವಾಗಿತ್ತು. ಆದರೆ, ಕೊರೊನಾ ಮತ್ತು ನಿಫಾ ವೈರಸ್ ಭೀತಿಯಿಂದಾಗಿ ಈ ಬಾರಿ ಸರಳ, ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಕೆಯಾಗಿದ್ದು ಭಕ್ತರ ಪ್ರವೇಶಕ್ಕೂ ನಿರ್ಬಂಧ ಹೇರಲಾಗಿದೆ.