ಚಾಮರಾಜನಗರ: ಬಿಜೆಪಿ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಮಾತ್ರ ಕೊರೊನಾ ಅಡ್ಡಿಯಾಗುತ್ತಿದೆ. ಶೇ 40ರಷ್ಟು ಕಮಿಷನ್ ಮಾತ್ರ ಸುಸೂತ್ರವಾಗಿ ನಡೆಯುತ್ತಿದೆ ಎಂದು ಕೈ ಮುಖಂಡ, ಶಾಸಕ ಕೃಷ್ಣ ಬೈರೇಗೌಡ ಲೇವಡಿ ಮಾಡಿದರು.
ನಗರದಲ್ಲಿ ನಡೆದ ಯುವಶಕ್ತಿ ನವದೃಷ್ಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಯಾವ ಅಭಿವೃದ್ಧಿ ವಿಚಾರ ಕೇಳಿದರೂ ಕೊರೊನಾ ಅಂತಾರೆ. ಶೇ 40ರಷ್ಟು ಕಮಿಷನ್ ಮಾತ್ರ ಸರಾಗವಾಗಿ ನಡೆಯುತ್ತಿದೆ. ಅದಕ್ಕೆ ಯಾವ ಅಡ್ಡಿಯೂ ಇಲ್ಲ. ಒಂದೆಡೆ ಕೊರೊನಾದಿಂದ ಜನರು ನರಳಾಡಿದರೆ, ಕೆಲವರು ಲೂಟಿ ಹೊಡೆದರು ಎಂದು ಆರೋಪಿಸಿದರು.
ಶಾಸಕ ಕೃಷ್ಣ ಬೈರೇಗೌಡ ಮಾತನಾಡಿದರು ಜಗಳ ಹತ್ತಿಸು, ಬೆಂಕಿ ಹೊತ್ತಿಸು, ಅಧಿಕಾರ ಅನುಭವಿಸು ಎಂಬುದಷ್ಟೇ ಬಿಜೆಪಿಯವರಿಗೆ ಗೊತ್ತು. ದೇಶ ಕಟ್ಟುವುದು, ಉದ್ಯೋಗ ಕಲ್ಪಿಸುವ ವಿಚಾರ ಯಾವುದು ಅವರಿಗೆ ಬೇಡ. ನಮ್ಮ ಗಡಿಯೊಳಗೆ ಚೀನಾದವರು ಬಂದು ಮನೆ ಕಟ್ಟಿಕೊಂಡಿದ್ದಾರೆ. ಆದರೆ, 56 ಇಂಚಿನ ಎದೆಯ ಪ್ರಧಾನಿ ಮಾತ್ರ ತುಟಿ ಬಿಚ್ಚುತ್ತಿಲ್ಲ. ದೇಶದ ರಕ್ಷಣೆ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ನಾವಿಬ್ಬರು - ನಮಗಿಬ್ಬರು ಎಂಬ ಸರ್ಕಾರ ನಡೆಯುತ್ತಿದೆ. ಮೋದಿ- ಅಮಿತ್ ಷಾ ಅವರಿಗೆ ಅದಾನಿ-ಅಂಬಾನಿ ಹಿತ ಮಾತ್ರ ಮುಖ್ಯ. ಶ್ರೀಮಂತರಿಗೆ ತೆರಿಗೆ ಕಡಿಮೆ ಮಾಡಿ ಬಡವರಿಗೆ ಬರೆ ಎಳೆಯುತ್ತಿದ್ದಾರೆ. ಕೊರೊನಾ ಕಾಲದಲ್ಲಿ ಬಡವರು ಬೀದಿಗೆ ಬಂದರೆ ಅಂಬಾನಿ ಮಾತ್ರ ತಮ್ಮ ಆದಾಯ ದ್ವಿಗುಣಗೊಳಿಸಿಕೊಂಡಿದ್ದಾರೆ. ಇದೇ ಬಿಜೆಪಿ ಸರ್ಕಾರದ ಆಡಳಿತದ ವೈಖರಿ ಎಂದು ವ್ಯಂಗ್ಯವಾಡಿದರು.
ಊಟ, ಬಟ್ಟೆ, ಸೂರು ಕೊಡುವ ಬದಲು ಮತಾಂತರ ನಿಷೇಧ, ಧರ್ಮ ರಾಜಕಾರಣ ಮಾಡುತ್ತ ಬಿಜೆಪಿ ವಿಷಯಾಂತರ ಮಾಡಿಕೊಂಡು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ವಿಧಾನ ಪರಿಷತ್ ಹಾಗೂ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಪೂರಕ ವಾತಾವರಣ ತೋರಿಸಿದ್ದು, ಮುಂಬರುವ ಚುನಾವಣೆಯಲ್ಲಿ ಅಧಿಕಾರ ಹಿಡಿದು ಜನಪರ ಕಾರ್ಯ ಮಾಡುತ್ತೇವೆ ಎಂದರು.
ನಿರುದ್ಯೋಗಿಗಳಿಗೆ 9 ಸಾವಿರ ಸ್ಟೈಫಂಡ್: ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಕ್ಷಾ ರಾಮಯ್ಯ ಮಾತನಾಡಿ, ಬಿಜೆಪಿಗೆ ಆಡಳಿತ ನಡೆಸುವ ಯೋಗ್ಯತೆ, ಸಾಮರ್ಥ್ಯ ಎರಡೂ ಇಲ್ಲ. ದಿನೇ ದಿನೆ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮುಂದೆ ನಮ್ಮ ಸರ್ಕಾರ ಬಂದರೆ ವಿದ್ಯಾವಂತ ನಿರುದ್ಯೋಗಿಗಳಿಗೆ 9 ಸಾವಿರ ರೂ. ಕೊಡುತ್ತೇವೆ ಎಂದರು. ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಜೀಜ್, ಶಾಸಕ ಸಿ. ಪುಟ್ಟರಂಗಶೆಟ್ಟಿ ಮತ್ತು ಆರ್. ನರೇಂದ್ರ ಇದ್ದರು.
ಓದಿ:Karnataka COVID update: ರಾಜ್ಯದಲ್ಲಿಂದು 289 ಮಂದಿಗೆ ಕೊರೊನಾ ದೃಢ, ನಾಲ್ವರು ಸಾವು