ಚಾಮರಾಜನಗರ : ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಇಹಲೋಕ ತ್ಯಜಿಸಿದ್ದಾರೆ. ಅವರ ಹುಟ್ಟೂರು ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಊರ ಮಗನನ್ನು ಕಳೆದುಕೊಂಡು ಜನರು ಕಂಗಲಾಗಿದ್ದಾರೆ. ಇಲ್ಲಿನ ಹೆಗ್ಗವಾಡಿ ಗ್ರಾಮದ ತೋಟದಲ್ಲಿ ತಂದೆ - ತಾಯಿ ಸಮಾಧಿಯ ಬಳಿಯಲ್ಲೇ ಧ್ರುವನಾರಾಯಣ ಅವರ ಅಂತ್ಯಕ್ರಿಯೆ ಭಾನುವಾರ ನಡೆಯಲಿದೆ. ಈ ಸಂಬಂಧ ಗ್ರಾಮದಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ.
ನಾಳೆ ಹುಟ್ಟೂರು ಹೆಗ್ಗವಾಡಿಯಲ್ಲಿ ಅಂತ್ಯಕ್ರಿಯೆ: ಹೆಗ್ಗವಾಡಿ ಗ್ರಾಮದ ಅಂಬೇಡ್ಕರ್ ಸಮಯದಾಯ ಭವನ ಸಮೀಪ ಅಂತಿಮ ದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೂ ಮುನ್ನ ಚಾಮರಾಜನಗರದ ಕಾಂಗ್ರೆಸ್ ಕಚೇರಿಗೆ ಪಾರ್ಥಿವ ಶರೀರವನ್ನು ತರಲಾಗುತ್ತದೆ. ಅಲ್ಲಿ, ಪಕ್ಷದ ವತಿಯಿಂದ ಗೌರವ ಸಲ್ಲಿಸಿ ಚಾಮರಾಜನಗರದ ವಿವಿಧ ಬೀದಿಗಳಲ್ಲಿ ಅಂತಿಮ ಯಾತ್ರೆ ನಡೆಸಲಾಗುತ್ತದೆ. ರಾತ್ರಿ 8 ಗಂಟೆ ಸುಮಾರಿಗೆ ಹುಟ್ಟೂರಿಗೆ ಪಾರ್ಥಿವ ಶರೀರ ತಲುಪಲಿದೆ.
ಈ ಹಿನ್ನಲೆ ರಾತ್ರಿ ಇಡೀ ಜಾಗರಣೆ, ಭಜನೆ ಕಾರ್ಯಕ್ರಮ ನಡೆಯಲಿದೆ. ಇಂದು ರಾತ್ರಿ ಮೂರರಿಂದ ಐದು ಸಾವಿರ ಮಂದಿಗೆ ಊಟ, ಭಾನುವಾರ ಬೆಳಗ್ಗೆ 10 ಸಾವಿರ ಮಂದಿಗೆ ಉಪಹಾರ ವ್ಯವಸ್ಥೆಗೆ ಸಿದ್ಧತೆ ಮಾಡಲಾಗುತ್ತಿದೆ. ತೋಟದಲ್ಲಿನ ತಂದೆ-ತಾಯಿ ಸಮಾಧಿ ಸಮೀಪವೇ ಧ್ರುವನಾರಾಯಣ ಅವರ ಅಂತ್ಯ ಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ. ಹಿಂದೂ ಧಾರ್ಮಿಕ ವಿಧಿ-ವಿಧಾನದಂತೆ ಗ್ರಾಮದಲ್ಲಿ ಮೆರವಣಿಗೆ ನಡೆಸಿ ತೋಟದಲ್ಲಿ ಹೂಳಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಭಾನುವಾರದ ನಡೆಯುವ ಅಂತ್ಯಕ್ರಿಯೆಯಲ್ಲಿ ಸಿದ್ದರಾಮಯ್ಯ, ಡಿಕೆಶಿ, ಪರಮೇಶ್ವರ ಸೇರಿದಂತೆ ರಾಜ್ಯದ ಕಾಂಗ್ರೆಸ್ ನಾಯಕರುಗಳು ಮತ್ತಿತರರು ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.
1 ದಿನ ಮುಂಚೆ ಹುಟ್ಟೂರಿನ ಮನೆಯಲ್ಲಿ ವಿಶ್ರಾಂತಿ ಪಡೆದಿದ್ದ ಧ್ರುವನಾರಾಯಣ : ಆರ್.ಧ್ರುವನಾರಾಯಣ ನಿಧನದ ಸುದ್ದಿ ರಾಜಕೀಯ ವಲಯದಲ್ಲಿ ದೊಡ್ಡ ಆಘಾತವನ್ನೇ ಉಂಟು ಮಾಡಿದ್ದರೆ ಇನ್ನೊಂದೆಡೆ ಶುಕ್ರವಾರವಷ್ಟೇ ಹುಟ್ಟೂರಿನ ಮನೆಯಲ್ಲಿ ವಿಶ್ರಾಂತಿ ಪಡೆದು ಶನಿವಾರ ಧ್ರುವನಾರಾಯಣ ಅವರು ಇಲ್ಲ ಎಂಬ ಮಾತನ್ನು ಗ್ರಾಮಸ್ಥರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ.